ಪೊಲೀಸ್ -
	ದೇಹದಲ್ಲಿ ಆಂತರಿಕ ಶಾಂತಿಯನ್ನು ಪರಿಪಾಲಿಸುವ ಅಪರಾಧಗಳನ್ನು ನಿವಾರಿಸುವ ಹಾಗೂ ಪತ್ತೆ ಹಚ್ಚುವ ಸರ್ಕಾರದ ವಿಧಿನಿಯಮಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಆಚರಣೆಗೆ ತರುವ ಮತ್ತು ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ಕಾಪಾಡಿ ಅವರಿಗೂ ಅವರ ಆಸ್ತಿಪಾಸ್ತಿಗಳಿಗೂ ರಕ್ಷಣೆ ಒದಗಿಸುವ ಶಾಸನಬದ್ಧ ವ್ಯವಸ್ಥೆ. ಗ್ರೀಕ್ ಭಾಷೆಯಲ್ಲಿ Poಟis ಎಂದರೆ ಗ್ರಾಮರಾಜ್ಯದ ಅಧಿಕಾರ ಕೇಂದ್ರ ಎಂದರ್ಥ. ಇದರ ವ್ಯುತ್ಪನ್ನವೇ ಇಂದಿನ Poಟiಛಿe (ಪೊಲೀಸ್) ಪದ.

	ಉಗಮ: ಪ್ರಪಂಚ ವ್ಯಾಪಿಯಾಗಿರುವ ಮಾನವ ಸಮಾಜದ ಮೂಲ ಘಟಕವೆಂದರೆ ವ್ಯಕ್ತಿ ಮತ್ತು ಆತನ ಕುಟುಂಬ. ಮೊದಲು ಮಾನವನ ಚಟುವಟಿಕೆ ತನ್ನದೇ ಆದ ಬುಡಕಟ್ಟಿಗೆ ಸೀಮಿತವಾಗಿತ್ತು. ಅಂದ ಮಾತ್ರಕ್ಕೆ ಆತನ ಜೀವನ ಸುರಕ್ಷಿತವಾಗಿ ಏನೂ ಇರಲಿಲ್ಲ. ನಿಸರ್ಗದ ಇತರ ಪ್ರಾಣಿಗಳಿಗಿಂತ-ಉದಾಹರಣೆಗೆ ಪಶುಪಕ್ಷಿಗಳು-ಮಾನವ ಅಧಿಕ ದುರ್ಬಲ ಹಾಗೂ ಅಸಹಾಯಕನಾಗಿದ್ದುದೇ ಇದರ ಕಾರಣ. ಗಗನಕ್ಕೆ ಹಾರಲಾಗದ, ನೆಲದ ಮೇಲೆ ಓಡಲಾಗದ, ನೀರಿನಲ್ಲಿ ಸಾಗಲಾರದ ಈತ ದುಷ್ಟಜಂತುಗಳ ಎದುರು ಯಾವುದೇ ಪರಿಣಾಮಕಾರಿ ಶಾಶ್ವತ ರಕ್ಷಣೆ ಪಡೆಯುವುದು ಕಷ್ಟವಾಗಿತ್ತು. ನಿಸರ್ಗ ಬಲಗಳ - ಗಾಳಿ, ಮಳೆ, ಹಿಮ, ಚಳಿ, ಬಿಸಿಲು - ಈತ ಆರಕ್ಷಕನೇ ಆಗಿದ್ದ. ಹೀಗೆ ಅಬಲನಾಗಿ ಹುಟ್ಟಿದರೂ ಮಾನವನಿಗೆ ಮಿಕ್ಕ ಎಲ್ಲ ಪ್ರಾಣಿಗಳಿಗಿಂತಲೂ ಅಧಿಕ ಬುದ್ಧಿಶಕ್ತಿ ಇರುವುದರಿಂದಲೇ ಆತ ಉಳಿದೆಲ್ಲ ಪ್ರಾಣಿಗಳನ್ನು ನಿಗ್ರಹಿಸಿ ಜಗದೇಕವೀರನಾಗಿ ಮೆರೆಯುತ್ತಿರುವುದಾಗಿದೆ. ಈ ನಿಟ್ಟಿನಲ್ಲಿ ಮಾನವ ತನ್ನ ಕುಟುಂಬದ ಜೊತೆ ಸಹಕರಿಸಿ ಬಾಳುವುದರ ಅವಶ್ಯಕತೆಯನ್ನು ಚೆನ್ನಾಗಿ ಅರಿತುಕೊಂಡಿದ್ದಾನೆ. ಸಹಕಾರ ಜೀವನ ಎಂದರೆ ಕೆಲವೊಂದು ಸ್ವಾಂಗೀಕೃತ ವಿಧಿನಿಯಮಗಳ ಪಾಲನೆ ಎಂಬುದು ಸ್ಪಷ್ಟ. ಕುಟುಂಬದ ಅಥವಾ ಸಮಾಜದ ಹಿತಕ್ಕಾಗಿ ವ್ಯಕ್ತಿ ಅನೇಕ ಸ್ವಾರ್ಥಮೂಲ ಆಸಕ್ತಿಗಳನ್ನು ತ್ಯಾಗ ಮಾಡಬೇಕು. ಪ್ರತಿಯಾಗಿ ಅದೇ ಕುಟುಂಬ ಅಥವಾ ಸಮಾಜ ವ್ಯಕ್ತಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಬೇಕು. ಆದರೆ, ವಾಸ್ತವ ಜೀವನ ಇಷ್ಟು ಸರಳವಲ್ಲ. ಸಲೀಸೂ ಅಲ್ಲ. ಸಾಮೂಹಿಕ ಮನ್ನಣೆ ಪಡೆದ ವಿಧಿ ನಿಯಮಗಳನ್ನು ಕೆಲವರಾದರೂ ತಮ್ಮ ಸ್ವಾರ್ಥಕ್ಕಾಗಿಯೋ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗಾಗಿಯೋ ಉಲ್ಲಂಘಿಸುವರೆಂಬುದು ಬೆಳಕಿಗೆ ಬಂತು. ಈ ತೆರನಾದ ನಿಯಮೋಲ್ಲಂಘನೆಯಿಂದಾಗಿ ಆಹಾರ ಸಂಗ್ರಹಣೆಗೆಂದು ಏರ್ಪಡಿಸಿದ ಬೇಟೆ ಅಥವಾ ಶತ್ರುಗಳ ಎದುರಾಗಿ ಹೂಡಿದ ಕಾಳಗ ಮುಂತಾದೆಡೆಗಳಲ್ಲಿ ನಷ್ಟವಾಗಿ ಇಡೀ ಸಮಾಜಕ್ಕೆ ಆಪತ್ತು ಒದಗುತ್ತಿತ್ತು. ಹೀಗಾಗಿ ವ್ಯಕ್ತಿಗಳು ಸಮಾಜದ ನಿಯಮಗಳನ್ನು ಉಲ್ಲಂಘಿಸದಂತೆ ವಿಧಿಸಲು ಮತ್ತು ಉಲ್ಲಂಘನಕಾರರನ್ನು ಸಕಾಲದಲ್ಲಿ ಹಿಡಿದು ಅದರಿಂದ ಒದಗಬಹುದಾದ ಉಪದ್ರವವನ್ನು ತಪ್ಪಿಸಲು ಮೀಸಲು ವ್ಯಕ್ತಿಗಳನ್ನೊ ವ್ಯಕ್ತಿ ಸಮುದಾಯಗಳನ್ನೊ ನೇಮಿಸುವುದು ಅಗತ್ಯವೆಂಬುದನ್ನು ಸಮಾಜಜೀವಿ ಮಾನವ ಆದಿ ದಿನಗಳಲ್ಲೇ ಕಂಡುಕೊಂಡ ಪೊಲೀಸ್ ಪಡೆದು ಉಗಮವನ್ನು ಇಲ್ಲಿ ಕಾಣುತ್ತೇವೆ. ಸಮಾಜದ ದೈನಂದಿನ ಚಟುವಟಿಕೆಗಳಲ್ಲಿ ಒಂದು ಅಗತ್ಯ ಅಂಗವಾಗಿ ಅದು ಮೈದಳೆಯಿತು. ಇಂದಿಗಾದರೂ ಮಹತ್ತರವಾಗಿ ಬೆಳೆದಿರುವ ಸಮಾಜಗಳಲ್ಲಿ ದುಷ್ಟ ವ್ಯಕ್ತಿಗಳು ಶಿಷ್ಟ ಜನರಿಗೂ ಇವರ ಆಸ್ತಿಪಾಸ್ತಿಗಳಿಗೂ ಕಂಟಕ ಸ್ವರೂಪರಾಗುವಾಗ ಅವರನ್ನು ಹತೋಟಿಯಲ್ಲಿ ಇಡುವ ಇಲ್ಲವೇ ಶಿಕ್ಷೆಗೊಳಪಡಿಸುವ ಮತ್ತು ತನ್ಮೂಲಕ ಶಿಷ್ಟಜನರಿಗೆ ಜೀವನ ಸ್ವಾಸ್ಥ್ಯ ಒದಗಿಸುವ ಪ್ರಮುಖ ಅಂಗವಾಗಿಯೇ ಪೊಲೀಸ್ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ. ಎಂದೇ ಪೊಲೀಸ್ ವ್ಯವಸ್ಥೆಯ ಉದ್ದೇಶ ಸದಾ ಒಂದೇ ಶಿಷ್ಟರಕ್ಷಣೆ, ದುಷ್ಟ ಮರ್ದನ ವಿಧಾನಗಳು ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದಾಗಿದೆ.

	ಸಮಾಜ ಚಿಕ್ಕದಾಗಿದ್ದು ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದ ಜನ ತಮ್ಮ ಸಾಮೂಹಿಕ ಜೀವನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ತಾವೇ ನೋಡಿಕೊಳ್ಳುತ್ತಿದ್ದ ಕಾಲದಲ್ಲಿ ಎಲ್ಲ ವಿವಾದಗಳನ್ನೂ ಬಗೆಹರಿಸಲು ಅಲ್ಲೇ ಒಂದು ಏರ್ಪಾಡು ಇರುತ್ತಿತ್ತು. ಇದರ ನಿದರ್ಶನವೆಂದರೆ ಅತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪಂಚಾಯ್ತಿಗಳು ವೇದ ಮತ್ತು ಪುರಾಣಗಳ ಪ್ರಕಾರ ಪ್ರತಿ ಗ್ರಾಮ ಗಣತಂತ್ರದಲ್ಲಿಯೂ ಜನರಿಂದ ಆಯ್ಕೆಗೊಂಡ ಸೇನಾನಿ. ಗ್ರಾಮಣಿ ಮತ್ತು ಪುರೋಹಿತ ಎಂಬ ಮೂವರು ಗ್ರಾಮಸೇವೆಗಾಗಿ ನಿಯೋಜಿತರಾಗಿದ್ದುದು ಕಂಡುಬರುತ್ತದೆ. ಇವರ ಪೈಕಿ ಗ್ರಾಮಣಿಗೆ ಈಗಿನ ಪೊಲೀಸ್ ಕರ್ತವ್ಯಗಳು ನಿಗದಿ ಆಗಿದ್ದುವು.

	ಕ್ರಮೇಣ ಹಿರಿ ರಾಷ್ಟ್ರಗಳು ಮೈದಳೆದಾಗಲೂ ಜನಸಾಮಾನ್ಯರು ತಮ್ಮ ಜೀವನದ ದೈವಂದಿನ ಆಗುಹೋಗಗಳನ್ನು ತಾವೇ ಪಂಚಾಯ್ತಿಗಳ ಮತ್ತು ಗ್ರಾಮಣಿಗಳ ಮೂಲಕ ನಿಯಂತ್ರಿಸಿಕೊಳ್ಳುತ್ತಿದ್ದುದು ವಾಡಿಕೆ ಆಗಿತ್ತು. ಆದರೆ, ಪಟ್ಟಣಗಳಲ್ಲಿ ನಾನಾ ವರ್ಗದ ನಾನಾ ಆಸಕ್ತಿಯ ಮತ್ತು ನಾನಾ ವೃತ್ತಿಯ ಜನ ಸೇರತೊಡಗಿದಂತೆ ಆ ಜನಗಳಲ್ಲಿ ಸಾಮೂಹಿಕ ಮನೋಭಾವನೆ ಇಲ್ಲವಾಗಿ ಪಂಚಾಯ್ತಿಗಳ ಅಥವಾ ಗ್ರಾಮಣಿಗಳ ಪಾತ್ರ ಪರಿಣಾಮಕಾರಿ ಎನಿಸಲಿಲ್ಲ. ಅಲ್ಲದೆ, ರಾಷ್ಟ್ರದ ನಾಯಕ ಅಥವಾ ರಾಜ ಆತನ ರಾಜಧಾನಿಯಲ್ಲಿಯೇ ಅಧಿಕಾರ ಕೇಂದ್ರವನ್ನು ಇಟ್ಟುಕೊಂಡಿದ್ದ. ಅವನು ಜನತೆಯ ಒಟ್ಟು ಯೋಗಕ್ಷೇಮ ಚಿಂತನೆ, ಶಾಂತಿ ಪರಿಪಾಲನೆ, ಅಪರಾಧಿಗಳನ್ನು ತಡೆಗಟ್ಟಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ನ್ಯಾಯ ನಿರ್ಣಯಕ್ಕಾಗಿ ತನ್ನ ಮುಂದೆ ಹಾಜರುಪಡಿಸುವುದು ಮುಂತಾದ ಕರ್ತವ್ಯಗಳಿಗಾಗಿ ನಗರಪಾಲ, ನಾಗರಿಕ ಅಥವಾ ಕೊತವಾಲ ಹೆಸರಿನ ಉನ್ನತ ಅಧಿಕಾರಿಯನ್ನು ನೇಮಿಸಿ ಆತನಿಗೆ ತಕ್ಕ ಸಿಬ್ಬಂದಿಯನ್ನು ಒದಗಿಸುತ್ತಿದ್ದ. ಅಲ್ಲಿಗೆ ಎರಡು ಬಗೆಯ ಪೊಲೀಸ್ ಪಡೆಗಳು ಸಹಜವಾಗಿ ರೂಪುಗೊಂಡಂತಾಯಿತು; ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಣಿ ಮತ್ತು ಪಂಚಾಯ್ತಿ, ಒಟ್ಟು ರಾಷ್ಟ್ರಕ್ಕಾಗುವಾಗ ಕೊತವಾಲ ಮತ್ತು ಆತನ ಸಿಬ್ಬಂದಿ.

	ಹೀಗೆ ವ್ಯವಸ್ಥೆಗೊಂಡ ಎರಡು ತರಹದ ಸಮಾಜ ರಕ್ಷಕ ದಳಗಳು ಹೆಚ್ಚು ಕಡಿಮೆ ಕೈಗಾರಕಾ ಕ್ರಾಂತಿಯ ತನಕವೂ ಕಾರ್ಯ ನಿರ್ವಹಿಸುತ್ತ ಬಂದುವು. ಕ್ರಾಂತಿಯ ಅನಂತರ ಪ್ರಪಂಚದ ಮುಖವೇ ಬೇರೆ ಆಯಿತು. ಹೊಸ ಸಿದ್ಧಿಗಳ ಜೊತೆಗೆ ಹೊಸ ಸಮಸ್ಯೆಗಳು ಹೊಸೆದುಕೊಂಡು ಅವನ್ನು ಬಿಡಿಸಲು ಹೊಸ ಹಾದಿಯನ್ನೇ ಅರಸಬೇಕಾಯಿತು. ಈ ಸಮಸ್ಯೆಗಳು ತತ್ಪೂರ್ವದ ಗ್ರಾಮ ಯಾ ರಾಷ್ಟ್ರಗಳಲ್ಲಿ ಎಂದೂ ತಲೆದೂರಿದಂತವಲ್ಲ. ಕ್ರಾಂತಿಯ ಫಲವಾಗಿ ಲಕ್ಷಾಂತರ ಜನ ಉದ್ಯೋಗಾರ್ಥಿಗಳಾಗಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋದರು. ಇವರಿಗೆ ವಸತಿ, ವಸನ, ಉಣಿಸು, ಉದ್ಯೋಗ ಮುಂತಾದುವನ್ನು ಪೂರೈಸುವ ಹೊಣೆ ಸರ್ಕಾರದ್ದಾಯಿತು. ಅಭಾವಗಳು ಈ ಜನರ ದೈನಂದಿನ ಬದುಕಿನ ಒಡನಾಡಿಗಳೇ ಆದುವು. ಅಲ್ಲದೆ, ಕೆಲಸ ಮತ್ತು ಜೀವನಾವಶ್ಯಕ ವಸ್ತು ಇವುಗಳ ನಡುವೆ ಪೈಪೋಟಿ ಅಧಿಕವಾಗಿದ್ದ ಅಂದಿನ ವಾತಾವರಣದಲ್ಲಿ ಈ ಮಂದಿಯನ್ನು ಶೋಷಿಸಿ ಮೆರೆಯಲು ಸ್ವಾರ್ಥಿಗಳು ಹೇಸದವರಾಗಿದ್ದರು. ಈ ಸಮಾಜಪೀಡಕರ ಹುಟ್ಟು ನೆಲೆಗಳಲ್ಲಿ ಇವರನ್ನು ಸಹಜವಾಗಿ ಹಿಡಿತದಲ್ಲಿಟ್ಟಿದ್ದ ಎಲ್ಲ ಬಂಧಗಳು ಹೊಸ ಪರಿಸ್ಥಿತಿಯಲ್ಲಿ ಕಳಚಿ ಹೋದುವು. ಎಂದೇ ಪಟ್ಟಣ ನಗರಗಳ ಅಡಕವಲ್ಲದ ಮತ್ತು ಏಕರೀತಿಯದಲ್ಲದ ಜನದಟ್ಟಣಿಯಲ್ಲಿ ಕಳ್ಳತನ, ದರೋಡೆ, ಕೂನಿ ಇತ್ಯಾದಿ ಮಾರಕ ಪ್ರಸಂಗಗಳು ಅಧಿಕವಾಗಿ ಬೆಳೆದುವು. 

	ಅಂದಿನ ಸರ್ಕಾರಗಳು ಈ ಹೊಸ ಸಮಸ್ಯೆಯ ಎದುರು ಸುಲಭವಾಗಿ ಪರಿಹಾರವನ್ನು ರೂಪಿಸಲು ಶಕ್ತವಾಗಿರಲಿಲ್ಲ. ಮೊದಲನೆಯದಾಗಿ ಪಟ್ಟಣಗಳಲ್ಲಿ ನೇಮಿಸಲಾದ ಕೊತವಾಲ, ಕ್ಷೇಮಪಾಲ ಮೊದಲಾದ ಪೊಲೀಸ್ ಪಡೆಗಳು ಆಳರಸರ ಕೈಗೊಂಬೆಗಳು: ರಾಜಕೀಯ ಪ್ರತಿಸ್ಪರ್ಧಿಗಳನ್ನು ನಿಗ್ರಹಿಸುವುದೇ ಅವುಗಳ ಮುಖ್ಯ ಹೊಣೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವು ಮಾರಕವೆಂಬ ಭಾವನೆ ಪ್ರಜೆಗಳಲ್ಲಿ ಸರ್ವವ್ಯಾಪ್ತಿ ಆಗಿತ್ತು. ಪೊಲೀಸ್ ಎಂದರೆ ಒಂದು ತೆರನಾದ ತಿರಸ್ಕಾರ ಅಥವಾ ವೈರಭಾವ ಪ್ರಚೋದಿತವಾಗುತ್ತಿತ್ತು. ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವ್ಯವಸ್ಥೆ ಇದೆಂಬ ಭಾವನೆ ಮೊಳೆಯುತ್ತಿತ್ತು. ಹೀಗಾಗಿ ಪ್ರಜಾಪ್ರಭುತ್ತ್ವವಿದ್ದ ರಾಜ್ಯಗಳಲ್ಲಿ ಅಪರಾಧಗಳನ್ನು ತಡೆಗಟ್ಟಿ ಸಮಾಜದಲ್ಲಿ ಕಾನೂನು ಮತ್ತು ಶಾಂತಿ ಪರಿಪಾಲನೆ ಮಾಡಲು ಪೊಲೀಸ್ ದಳವೊಂದನ್ನು ಸಂಘಟಿಸುವ ಯೋಚನೆಗೆ ಯಾವ ಮನ್ನಣೆಯೂ ದೊರೆಯಲಿಲ್ಲ. ಸರ್ಕಾರದ ಬಳಿ ಇದ್ದ ಅಸ್ತ್ರಗಳೆಂದರೆ ಕಾನೂನು ಮತ್ತು ಸೈನ್ಯ. ಹೊಸ ಸನ್ನಿವೇಶವನ್ನು ಎದುರಿಸಲು ಅದರಲ್ಲೂ ದಂಗೆ ಎದ್ದ ಗುಂಪುಗಳನ್ನು ಚದುರಿಸಲು ಹೆಚ್ಚು ಹೆಚ್ಚಾಗಿ ಸೈನ್ಯವನ್ನು ಉಪಯೋಗಿಸುವುದು ಅನಿವಾರ್ಯವಾಯಿತು. ಅದರ ಸೈನ್ಯದ ಕಾರ್ಯೋದ್ದೇಶವೇ ಬೇರೆ: ಬಾಹ್ಯ ಶತ್ರುದಮನ ಮತ್ತು ಗಡಿರಕ್ಷಣೆ, ಸ್ವಂತ ಪ್ರಜೆಗಳ ಮೇಲೆ-ಅದೂ ನಿಶ್ಯಸ್ತ್ರ ಮಂದಿಯ ಎದುರಾಗಿ-ಸೈನ್ಯಾಚರಣೆಗಳು ಸರ್ಕಾರಗಳನ್ನು ತುಂಬ ಪೇಚಿನ ಸನ್ನಿವೇಶದಲ್ಲಿ ಸಿಕ್ಕಿಸುತ್ತಿದ್ದುವು. ಜವಾನ ವಿದ್ಯಾವಂತನಲ್ಲದಿರಬಹುದು. ಆದರೆ, ಸ್ವದೇಶದ ರಕ್ಷಣೆಯಲ್ಲಿ ಸರ್ವಾರ್ಪಣೆ ಮಾಡುವ ಆತ ಸ್ವಜನವಿರೋಧವಾಗಿ ನಿಲ್ಲಬೇಕಾದಾಗ, ಅಥವಾ ಹಾಗೆ ನಿಲ್ಲಲು ನಿಯುಕ್ತನಾದಾಗ, ನಿರುತ್ಸಾಹಿಯಾಗುತ್ತಾನೆ. ರಾಷ್ಟ್ರಹಿತದ ದೃಷ್ಟಿಯಿಂದ ಇದು ವಿಘಾತಕವಾಗದಿರದು. ಅತ್ತ ಸೈನ್ಯಗಳ ಘೋರ ಕೃತ್ಯಗಳಿಂದ ಜನರಲ್ಲಿ ಅಶಾಂತಿ ಇನ್ನೂ ಹೆಚ್ಚಿತು. ಇತ್ತ ಸೈನ್ಯಾಧಿಕಾರಿಗಳು ಈ ಕರ್ತವ್ಯ ತಮ್ಮದಲ್ಲ. ಇದು ತಮಗೆ ಸಹ್ಯವಾಗದೆಂದು ಹಿಂದೇಟು ಹೊಡೆಯಲಾರಂಭಿಸಿದರು.

	ಇತ್ತ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ಅಪರಾಧಗಳಿಂದ ಕಳ್ಳತನ, ದರೋಡೆ ಮುಂತಾದವು ಮೇರೆಮೀರಿದಾಗ ದಿಕ್ಕುಗಾಣದ ಆಡಳಿತಗಾರರು ಅಪರಾಧಗಳಿಗಾಗಿ ಕಾನೂನಿನಲ್ಲಿ ವಿಧಿಸಿದ್ದ ಶಿಕ್ಷೆಯನ್ನು ಪದೇ ಪದೇ ಹೆಚ್ಚಿಸತೊಡಗಿದರು. ಉದಾಹರಣೆಗೆ ಹದಿನೇಳನೆಯ ಶತಮಾನದ ಆದಿಯಲ್ಲಿ ಇಂಗ್ಲೆಂಡಿನಲ್ಲಿ ಕಳ್ಳತನ ಮುಂತಾದ ಮುನ್ನೂರ ಐವತ್ತಕ್ಕೂ ಹೆಚ್ಚಿನ ಅಪರಾಧಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಅಪರಾಧವೆಸಗಿ ಸಿಕ್ಕಿಬಿದ್ದವರನ್ನು ಶೂಲಕ್ಕೇರಿಸುತ್ತಿದ್ದರು. ಕೇವಲ 10-12 ವರ್ಷದ ಬಾಲಕರನ್ನಾದರೂ ಕರವಸ್ತ್ರ ಇತ್ಯಾದಿ ಸಣ್ಣ ಸಣ್ಣ ಪದಾರ್ಥಗಳ ಕಳವಿಗಾಗಿ ಗಲ್ಲುಗಂಬಕ್ಕೇರಿಸಿ ಕೊಲ್ಲುತ್ತಿದ್ದರು. ಆದರೆ, ಕಳ್ಳತನದಲ್ಲಿ ಸಿಕ್ಕಿಬಿದ್ದ ಚಿಲ್ಲರೆಗಳ್ಳರನ್ನು ಬಿಟ್ಟರೆ ಇತರರ ಬಗ್ಗೆ ಅಂದರೆ ಗುಟ್ಟಾಗಿ ಮನೆಗಳಿಗೆ ಕನ್ನಕೊರೆದು ಕಳವು ಮಾಡುತ್ತಿದ್ದವರನ್ನೂ ಹೆದ್ದಾರಿಗಳಲ್ಲಿ ಪ್ರಯಾಣಿಕರನ್ನು ತಡೆದು ನಿಲ್ಲಿಸಿ ದರೋಡೆ ಮಾಡುತ್ತಿದ್ದವರನ್ನೂ ಪತ್ತೆಹಚ್ಚಿ ಕೈದುಮಾಡಿ ನ್ಯಾಯಾಂಗದ ಮುಂದೆ ಹಾಜರುಪಡಿಸಲು ಯಾವ ವ್ಯವಸ್ಥೆಯೂ ಇರಲಿಲ್ಲ. ಈ ಪಾತಕಿಗಳು ಯಾರಿಗೂ ಮಣಿಯುತ್ತಿರಲಿಲ್ಲ. ಅಲ್ಪ ಅಪರಾಧಗಳಿಗೆ ಘೋರ ಶಿಕ್ಷೆ, ಘೋರ ಅಪರಾಧಗಳಿಗೆ ಶೂನ್ಯ ಶಿಕ್ಷೆ! ಕಾರಣ ಮೊದಲನೆಯ ವರ್ಗದ ಅಪರಾಧಿಗಳು ಸಿಕ್ಕಿಹಾಕಿಕೊಳ್ಳುತ್ತಿದ್ದರು. ಎರಡನೆಯ ವರ್ಗದವರು ಸರ್ವತಂತ್ರ ಸ್ವತಂತ್ರರಾಗಿದ್ದರು. ಹೀಗಾಗಿ ಘೋರ ಅಪರಾಧಗಳು ಹೆಚ್ಚು ಹೆಚ್ಚಾಗಿ ಸಂಭವಿಸತೊಡಗಿದುವು. ಕಳ್ಳತನ ಮಾಡುವವರದೇ ಸಂಸ್ಥೆಗಳಿದ್ದುವು. ಜನರಿಗೆ ಕಳ್ಳತನದ ಎದುರು ರಕ್ಷಣೆ ಒದಗಿಸಲು ಇದೇ ಸಂಸ್ಥೆಗಳು ಸ್ವತಃ ಜನರಿಂದಲೇ ದಂಡ ದೋಚುತ್ತಿದ್ದವು. ಇವೇ ಮುಂತಾದ ಎಂದು ನಂಬಲೂಬಾರದಂಥ ಏರ್ಪಾಡುಗಳು ಹದಿನೇಳನೆಯ ಶತಮಾನದ ಸಮಾಜ ಜೀವನದ ವೈವಿಧ್ಯವಾಗಿತ್ತು. ಯೂರೋಪ್ ಖಂಡದ ರಾಷ್ಟ್ರಗಳು ಪ್ರಪಂಚಾದ್ಯಂತ ಸಾಮ್ರಾಜ್ಯಗಳನ್ನು ಕಟ್ಟಿದ ಕಾಲವದು. ಆ ರಾಷ್ಟ್ರಗಳ ಸೈನಿಕರೂ ನಾವಿಕರೂ ಪ್ರಪಂಚದ ಮೂಲೆ ಮೂಲೆಗಳಲ್ಲಿ ತಮ್ಮ ಯುಕ್ತಿಸಾಹಸಗಳಿಂದ ಅನೇಕ ರಾಷ್ಟ್ರಗಳನ್ನು ಯುದ್ಧದಲ್ಲಿ ಸೋಲಿಸಿ ಅವನ್ನೆಲ್ಲ ವಶಪಡಿಸಿಕೊಳ್ಳುತ್ತಿದ್ದ ಕಾಲದಲ್ಲಿ ಖುದ್ದು ಅವರ ನಾಡುಗಳಲ್ಲಿ ಆಂತರಿಕ ಕಳ್ಳಕಾಕರ ಮತ್ತು ದರೋಡೆಕಾರ ದಗಲಬಾಜಿಗಳ ಎದುರು ಯಾವ ವ್ಯವಸ್ಥಿತ ರಕ್ಷಣೆಯೂ ಇಲ್ಲದೆ ಅರಾಜಕತೆಯಲ್ಲಿತ್ತು. ಜನ ಜೀವನ ಹೀಗೆ ಹದ್ದು ಮೀರಿ ಹದಗೆಡುತ್ತಿದ್ದರೂ ಪೊಲೀಸ್ ಪಡೆಗಳು ಮಾತ್ರ ವ್ಯಕ್ತಿ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕು ಬಾದ್ಯತೆಗಳಿಗೆ ಧಕ್ಕೆಯುಂಟುಮಾಡದಿರವುದು ಎಂಬ ಕುರುಡು ನಂಬಿಕೆ ಜನರಿಂದ ತೊಲಗಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದಾಗ, 1829ರಲ್ಲಿ ಇಂಗ್ಲೆಂಡಿನ ಗೃಹಮಂತ್ರಿಯಾಗಿದ್ದ ಸರ್ ರಾಬರ್ಟ್ ಪೀಲ್ ಎಂಬಾತ ಅದೇ ತಾನೆ ಐರ್ಲೆಂಡಿನಲ್ಲೂ ಲಂಡನ್ ನಗರದ ಸುತ್ತುಮುತ್ತಲಿನ ಕೆಲವು ಭಾಗಗಳಲ್ಲೂ ಏರ್ಪಾಡು ಮಾಡಿದ್ದ ಪೊಲೀಸ್ ವ್ಯವಸ್ಥೆ ನಿರ್ವಹಿಸಿದ ಶ್ಲಾಘನೀಯ ಕಾರ್ಯಾಧಾರದ ಮೇಲೆ ಇಡೀ ಲಂಡನ್ ಪಟ್ಟಣಕ್ಕೆ ಪೊಲೀಸ್ ಪಡೆಯೊಂದನ್ನು ನಿರ್ಮಿಸುವ ಶಾಸನವನ್ನು ಮುಂದೆ ತಂದ. ಪ್ರಜಾಪ್ರಭುತ್ವಾತ್ಮಕ ಸರ್ಕಾರ ಪೊಲೀಸ್ ವ್ಯವಸ್ಥೆಯೊಂದನ್ನು ಅಳವಡಿಸಿಕೊಂಡರೆ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬರುವುದೆಂಬ ಶಂಕೆ ಜನಸಾಮಾನ್ಯರಿಂದ ಮತ್ತು ರಾಜಕಾರಣಿಗಳಿಂದ ಇನ್ನೂ ಮರೆ ಆಗಿರದಿದ್ದರೂ ಗೃಹಮಂತ್ರಿ ತುಂಬ ಕೌಶಲದಿಂದ ಉಭಯ ಸದನಗಳೂ ಆ ಕಾಯ್ದೆಯನ್ನು ಒಪ್ಪುವಂತೆ ವಿವರಿಸಿ ಅದಕ್ಕೆ ಮಂಜೂರಾತಿ ಪಡೆದ. ಲಂಡನ್ನಿನ 1910 ಚ.ಕಿ.ಮೀ. ಪ್ರದೇಶದಲ್ಲಿ 15 ಲಕ್ಷ ಜನಸಂಖ್ಯೆಯಿಂದ ಕೂಡಿದ ಕ್ಷೇತ್ರದಲ್ಲಿ 1829 ಸೆಪ್ಟಂಬರ್ 29 ರಂದು ಸುಮಾರು 3,000 ಸಂಖ್ಯೆಯ ಪೊಲೀಸ್ ಪಡೆ ಕಾರ್ಯಾಚರಣೆಗಿಳಿಯಿತು. ಪ್ರಪಂಚದ ಮೊಟ್ಟಮೊದಲ ಆಧುನಿಕ ಪೊಲೀಸ್ ವ್ಯವಸ್ಥೇ ಜನ್ಮತಳೆದದ್ದು ಆಗಲೇ. ಇದರ ಉದ್ದೇಶ ಪ್ರಜಾರಕ್ಷಣೆ. ನಾಗರಿಕ ಹಕ್ಕು ಬಾಧ್ಯತೆಗಳಿಗೆ ಒಂದಿಷ್ಟೂ ಚ್ಯುತಿ ಬಾರದಂತೆ ಈ ಸುಸಜ್ಜಿತ ಪಡೆ ಕೆಲವೇ ವರ್ಷಗಳಲ್ಲಿ ಲಂಡನ್ನಿನಂಥ ಮಹಾನಗರದಲ್ಲಿ ಶಿಷ್ಟಪಾಲನೆ ಹಾಗೂ ದುಷ್ಟದಮನ ಮಾಡಿತು. ತತ್ಪರಿಣಾಮವಾಗಿ 1836 ರಿಂದ 1852ರ ತನಕ ಇಡೀ ಬ್ರಿಟಿಷ್ ದ್ವೀಪದಲ್ಲಿ ಇದೇ ಮಾದರಿಯ 380 ಕ್ಕೂ ಹೆಚ್ಚು ಪೊಲೀಸ್ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

	ಪ್ರಜಾತಂತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಂಡ ಪೊಲೀಸಿನ ಧ್ಯೇಯ ಮತ್ತು ನಿಯಮಗಳು ಹೀಗಿವೆ: 

	1. ಗಲಭೆ, ದಂಗೆ ಆರಂಭವಾದ ಬಳಿಕ ಅವನ್ನು ಶಸ್ತ್ರಪ್ರಹಾರದಿಂದ ಅಡಗಿಸುವುದರ ಬದಲು ಅವು ಆಗದಂತೆ ತಡೆಗಟ್ಟುವುದು ಪೊಲೀಸರ ಕರ್ತವ್ಯ ಅಂತೆಯೇ ಅಪರಾಧಗಳಿಗೆ ಹೆಚ್ಚು ಹೆಚ್ಚು ದಂಡವನ್ನು ವಿಧಿಸುವುದರ ಬದಲು ಅವು ಸಮಾಜದಲ್ಲಿ ಘಟಿಸದಂತೆ ಮಾಡಲು ಅಧಿಕ ಸೌಕರ್ಯಗಳನ್ನು ಕಲ್ಪಿಸುವುದು ಪೊಲೀಸರ ಆದ್ಯ ಕರ್ತವ್ಯ.

	2. ಪೊಲೀಸರು ತಮ್ಮ ಈ ಕರ್ತವ್ಯ ಮತ್ತು ಧ್ಯೇಯಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ನಾಗರಿಕರ ವಿಶ್ವಾಸ, ಸಹಕಾರ, ಬೆಂಬಲ ಜರೂರಿನ ಅವಶ್ಯಕತೆಗಳು, ಆದ್ದರಿಂದ, ಪೊಲೀಸರು ಯಾವಾಗಲೂ ತಮ್ಮ ಕರ್ತವ್ಯವನ್ನು ಕಾನೂನಿನ ಚೌಕಟ್ಟಿನೊಳಗೆ ಜನಾದರವನ್ನೂ ಗೌರವವನ್ನೂ ಪಡೆಯುವಂತೆ ನಿಷ್ಪಕ್ಷಪಾತವಾಗಿ ಮತ್ತು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ನೀತಿ ರಿವಾಜುಗಳಿಗೆ ಶರಣಾಗದ ತೆರನಾಗಿ ನಿರ್ವಹಿಸಬೇಕು.

	3. ಸಾಧ್ಯವಾಗುವ ಮಟ್ಟಿಗೂ ಸಮಾಜ ಶಾಂತಿಯನ್ನು ಪಾಲಿಸುವಲ್ಲಿ ಬುದ್ದಿವಾದ. ಹಿತೋಕ್ತಿ, ಎಚ್ಚರಿಕೆ ಮುಂತಾದ ಹಿಂಸಾತ್ಮಕವಲ್ಲದ ಆದರೆ, ರಚನಾತ್ಮಕವಾದ ವಿಧಾನಗಳನ್ನು ಅನುಸರಿಸಬೇಕು. ಇವು ವಿಫಲಗೊಂಡಾಗ ಮಾತ್ರ ನಿಷೇಧಾತ್ಮಕ ವಿಧಾನಗಳಿಗೆ ಅಂದರೆ ಬಲಪ್ರಯೋಗಕ್ಕೆ ಕೈಹಾಕಬೇಕು. ಇಲ್ಲದರೂ ಅತಿರೇಕ ಸಲ್ಲದು-ಶಾಂತಿ ಪುನಸ್ಸ್ಥಾಪನೆಗೆ ಎಷ್ಟು ಬೇಕೊ ಅಷ್ಟು ಮಾತ್ರ. ಕಾನೂನಿನಲ್ಲಿ ವಿಧಿಸಿರುವಂತೆ ಕನಿಷ್ಠ ಪ್ರಮಾಣದಲ್ಲಿ ಬಲಪ್ರಯೋಗ ಮಾಡಬೇಕು.

	4. ಪೊಲೀಸರಾದರೂ ಪ್ರಥಮತಃ ಪ್ರಜೆಗಳ ಹಿತರಕ್ಷಣೆಗಾಗಿ ಅದರಿಂದಲೇ ಆಯಲಾದ ಶಿಸ್ತಿನ ಕೂಟದ ಸದಸ್ಯರು. ಸಂವಿಧಾನಾತ್ಮಕವಾದ ಈ ಜಾಗದ ಕಾರ್ಯ ಕಲಾಪಗಳ ಜೊತೆ ಸಹಕರಿಸುವುದು ಪ್ರತಿ ಪ್ರಜೆಯ ಆದ್ಯಕರ್ತವ್ಯ ಎಂಬುದು ಎಲ್ಲರಿಗೂ ತಿಳಿದಿರಬೇಕು.

	ಸ್ಕಾಟ್ಲೆಂಡ್‍ಯಾರ್ಡ್ ಎಂಬ ಹೆಸರಿನ ಸಂಸ್ಥೆ ಈ ಪೊಲೀಸ್ ಸಂಸ್ಥೆಗಳ ಪೈಕಿ ವ್ಯಾಪಕ ಪ್ರಸಿದ್ಧಿಗಳಿಸಿದೆ. ಲಂಡನ್ ಮಹಾನಗರದ ಪೊಲೀಸ್ ವ್ಯವಸ್ಥೆಯ ಅಂಗವಾಗಿ ಅಪರಾಧ ಶೋಧನ ಇಲಾಖೆಯನ್ನು (ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‍ಮೆಂಟ್, ಸಿಐಡಿ) 19ನೆಯ ಶತಮಾನದಲ್ಲಿ ಮೊದಲಿಗೆ ರೂಪಿಸಿದಾಗ ಅದನ್ನು ನೆಲೆಗೊಳಿಸಿದ ಕಟ್ಟಡ ಸ್ಕಾಟ್ಲೆಂಡಿನ ದೊರೆಗಳು ಲಂಡನ್ನನ್ನು ಸಂದರ್ಶಿಸುತ್ತಿದ್ದಾಗ ತಂಗುತ್ತಿದ್ದ ನಿವೇಶನದಲ್ಲಿತ್ತು ಎಂದೇ ಈ ಹೆಸರು. 

	ಒಂದು ಗ್ರಾಮದ, ಹೋಬಳಿಯ ಯಾ ತಾಲ್ಲೂಕಿನ ಪೊಲೀಸ್ ದಳಕ್ಕಿಂತ ಭಿನ್ನವಾದುದು ಸ್ಕಾಟ್ಲೆಂಡ್‍ಯಾರ್ಡ್. ವಾಸ್ತವವಾಗಿ ಇದೊಂದು ದಳವೇ ಅಲ್ಲ. ಬದಲು, ಲಂಡನ್ ನಗರದ ವಿಸ್ತøತ ವ್ಯಾಪ್ತಿಯೊಳಗೆ ನಾಗರಿಕರಿಗೆ ಕಾನೂನು ರಕ್ಷಣೆ ಒದಗಿಸಲು ನಿಯೋಜಿತವಾಗಿರುವ ಪೊಲೀಸ್ ಬಲಗಳ ಶೋಧಕ ವಿಭಾಗ ಮಾತ್ರ.

	ಅಂದು ಇಂಗ್ಲೆಂಡಿನಲ್ಲಿದ್ದ ಪೊಲೀಸ್ ಬಲಗಳ ಪೈಕಿ ಹೆಚ್ಚಿನವು ನಿಜಕ್ಕೂ ಪುಟ್ಟ ತುಕಡಿಗಳು. ಅವುಗಳಲ್ಲಿಯ ಪೇದೆಗಳಿಗೆ ಹೆಚ್ಚಿನ ತರಬೇತಿ ಏನನ್ನೂ ಕೊಟ್ಟಿರಲಿಲ್ಲ, ಸಲಕರಣೆಗಳ ನೆರವೂ ಇರಲಿಲ್ಲ. ಇನ್ನು ಅವರ ದಕ್ಷತೆಯ ಮಟ್ಟವಂತೂ ಅಷ್ಟಕ್ಕಷ್ಟೇ. ಅಂದ ಮೇಲೆ ಕೊಲೆ, ದರೋಡೆಗಳನ್ನು ಶೋಧಿಸಲು ಅವಶ್ಯಕವಾದ ದೈಹಿಕ ಚಾತುರ್ಯ ಹಾಗೂ ಮಾನಸಿಕ ಸ್ಥೈರ್ಯ ಅವರಲ್ಲಿ ಶೂನ್ಯ ಗುಣಗಳಾಗಿದ್ದುದು ನಿರೀಕ್ಷಿತವೇ. ಹೀಗಲ್ಲದೇ ನಗರದ ಪೊಲೀಸ್ ಬಲವಾದರೋ ಆರಂಭದಿಂದಲೂ ಒಂದು ಪ್ರಬಲ ಸುಸುಂಘಟಿತ ವ್ಯವಸ್ಥೆಯಾಗಿತ್ತು. ನೂತನ ಶಿಕ್ಷಣಾರ್ಥಿಗಳಿಗೆ ವ್ಯವಸ್ಥಿತ ಶಿಕ್ಷಣ ಕೊಡುವ ಕ್ರಮ ಅದರಲ್ಲಿ ಜಾರಿಗೆ ಬಂದಿತ್ತು. ಇನ್ನೂ ಒಂದು ಕಾರಣವೆಂದರೆ ಲಂಡನ್ನಿನಲ್ಲಿ ಗಂಭೀರ ಸ್ವರೂಪದ ಅಪರಾಧಗಳೂ ಪ್ರತಿದಿನವೂ ಎಂಬಂತೆ ಘಟಿಸುತ್ತಲೇ ಇದ್ದು ನಗರ ಪೊಲೀಸ್ ದಳದ ಶೋಧಕ ದಳ-ಸ್ಕಾಟ್ಲೆಂಡ್‍ಯಾರ್ಡ್-ಅವುಗಳ ತಪಾಸಣೆಯಲ್ಲಿ ಸಮೃದ್ಧ ಅನುಭವಗಳಿಸಿತು. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೊಲೆಯಂಥ ಘೋರಾಪರಾಧ ಘಟಿಸಿದಾಗ ಅದರ ಶೋಧನೆಗಾಗಿ ಅಲ್ಲಿಯ ಪೊಲೀಸ್ ವರಿಷ್ಠರು ಸ್ಕಾಟ್ಲೆಂಡ್‍ಯಾರ್ಡಿನ ನುರಿತ ಶೋಧಕರ ನೆರವು ಕೋರಿ ಪಡೆಯುತ್ತಿದ್ದುದು ರೂಢಿಯಾಯಿತು.

	ಇದು ಹೇಗೂ ಇರಲಿ ಸ್ಕಾಟ್ಲೆಂಡ್‍ಯಾರ್ಡ್ ಎಂಬ ಹೆಸರಿನ ಸುತ್ತ ಮಿನುಗುತ್ತಿರುವ ಪ್ರಭಾವಳಿಯ ಬಹುತೇಕ ಕಾರಣ ಪತ್ತೆದಾರಿ ಕಾದಂಬರಿಕಾರರೂ ಕುಂಚಿಸಿರುವ ಕಲ್ಪನಾವಿಲಾಸ. ನಿಜಸ್ಥಿತಿಯೆಂದರೆ ಈ ಅಪರಾಧ ಶೋಧನ ಇಲಾಖೆ ಸಾಧಿಸಿರುವ ಯಶಸ್ಸಿನ ದರ ಇತರ ಯಾವುದೇ ದೇಶದ ಸದೃಶ್ಯ ಇಲಾಖೆಯ ದರಕ್ಕಿಂತ ಹೆಚ್ಚಿನದೇನೂ ಅಲ್ಲ. 

	5. ತಮ್ಮ ಕರ್ತವ್ಯಪಾಲನೆಯಲ್ಲಿ ಪೊಲೀಸರು ಕೈಗೊಳ್ಳುವ ಪ್ರತಿಯೊಂದು ಕ್ರಮದ ಬಗ್ಗೆ ಅವರು ಸಮಾಜಕ್ಕೂ ದೇಶದ ಕಾನೂನಿಗೂ ಜವಾಬ್ದಾರರಾಗಿರಬೇಕು. 

	ಪೊಲೀಸ್ ವ್ಯವಸ್ಥೆಯ ಇತಿಮಿತಿಗಳು: ಪೊಲೀಸ್ ವ್ಯವಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಈ ಮೇಲೆ ವಿವರಿಸಿದ ರೀತಿಯಲ್ಲಿ ಉದಾತ್ತ ಧ್ಯೇಯಗಳನ್ನು ವಿಧಿಸಿದ ಮಾತ್ರಕ್ಕೆ ಸಮಾಜದಲ್ಲಿ ಅಪರಾಧಗಳೆಲ್ಲವೂ ನಿಂತು ಹೋಗಿ ಸುಭದ್ರ ಶಾಂತಿ ಏರ್ಪಡುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಅಪರಾಧಗಳು ಘಟಿಸಲು ಮತ್ತು ಅಶಾಂತ ಸನ್ನಿವೇಶ ತಲೆದೋರಲು ಕಾರಣಗಳು ಅನೇಕ. ದೇಶದ ಸಂವಿಧಾನ ಉದಾತ್ತವಾಗಿದ್ದರೂ ರಾಜಕೀಯ ಪರಿಸ್ಥಿತಿ ಪಕ್ಷ ಪಕ್ಷಗಳ ನಡುವಿನ ಘರ್ಷಣೆ, ಸಮಾಜದ ಆಂತರಿಕ ಜಟಿಲ ಸಮಸ್ಯೆ ಇವೆಲ್ಲವೂ ಶಾಂತಿಯನ್ನು ನಿರಂತರವಾಗಿ ಕದಡುತ್ತಿರುತ್ತವೆ. ಆದ್ದರಿಂದ ಅತ್ಯುತ್ತಮ ಸನ್ನಿವೇಶದಲ್ಲಿ ಕೂಡ ಪೊಲೀಸ್ ವ್ಯವಸ್ಥೆಯೊಂದರಿಂದಲೇ ಶಾಂತಿ ಪ್ರತಿಷ್ಠಾಪನೆಯಾಗಲಿ ಪರಿಪಾಲನೆಯಾಗಲಿ ಸಾಧ್ಯವಾಗದು. ವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗದ ಕಾರಣವಾಗಿ ಶಾಂತಿಭಂಗವಾಗಬಹುದಾದ ಸನ್ನಿವೇಶಗಳನ್ನು ಸತತವೂ ಗಮನಿಸುತ್ತಿದ್ದು ಅದು ಸಂಭವಿಸುವ ವೇಳೆ ಬಂದಾಗ ಸಂಬಂಧಪಟ್ಟ ಮುಖಂಡರಿಗೂ ಅವರ ಅನುಯಾಯಿಗಳಿಗೂ ಬುದ್ಧಿವಾದ ಮತ್ತು ಎಚ್ಚರಿಕೆ ನೀಡಬಹುದು. ಅವಶ್ಯವೆನಿಸಿದರೆ ಅವರನ್ನು ತಾತ್ಕಾಲಿಕವಾಗಿ ಬಂಧನದಲ್ಲಿಡಬಹುದು. ಇಷ್ಟು ಮಾತ್ರ ಪೊಲೀಸರಿಂದಾಗಬಹುದಾದ ಕರ್ತವ್ಯ. ಸಮಾಜದಲ್ಲಿ ಅಸಮಧಾನ ವಿಪರೀತವಾಗಿ ರಾಜಕೀಯ ಪಕ್ಷಗಳು ಉಲ್ಬಣಿಸಿ ತಮ್ಮ ಕಾರ್ಯಸಾಧನೆಗೆ ಕಾನೂನಿನ ಶಿಸ್ತನ್ನು ಬದಿಗೆಸೆಯಲು ಮುಂದಾದಾಗ ಪೊಲೀಸರ ಸಾಂಪ್ರದಾಯಿಕ ಶಿಸ್ತುಪಾಲಕ ಕ್ರಮಗಳು ವ್ಯರ್ಥವಾಗಿ ಗಲಭೆಗಳು ಸಂಭವಿಸಿ ಆಸ್ತಿಪಾಸ್ತಿಗಳಿಗೂ ಜನರ ಮಾನಪ್ರಾಣಗಳಿಗೂ ಧಕ್ಕೆ ಸಂಭವಿಸುವುದುಂಟು. ಅಂಥ ದುರ್ಮುಹೂರ್ತಗಳಲ್ಲಿ ಘರ್ಷಿಸುವ ಗುಂಪುಗಳನ್ನು ಚದುರಿಸಲು ಇಲ್ಲವೇ ಸಾರ್ವಜನಿಕ ಸ್ವತ್ತುಗಳಿಗೆ ಸಂಭವಿಸಬಹುದಾದ ಇಲ್ಲವೇ ಸಂಭವಿಸುತ್ತಿರುವ ಹಾನಿಗಳನ್ನು ತಹಬದಿಗೆ ತರಲು ಪೊಲೀಸರು ಗತ್ಯಂತರವಿಲ್ಲದೇ ದಂಡ ಪ್ರಯೋಗವನ್ನು ಮಾಡಲೇಬೇಕಾಗುವುದು. ದೇಶದ ಕಾನೂನಿನ ಪ್ರಕಾರ ಈ ಕ್ರಮಗಳನ್ನು ಕೈಗೊಂಡರೂ ಪೊಲೀಸರನ್ನು ದೂರುವುದು ಮಾತ್ರ ವಾಡಿಕೆಯಾಗಿ ಹೋಗಿದೆ. 

	ಹೀಗೆಯೇ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ಅಪರಾಧಗಳನ್ನು ತಡೆಗಟ್ಟುವುದರಲ್ಲೂ ಪತ್ತೆ ಹಚ್ಚುವುದರಲ್ಲೂ ಪೊಲೀಸರ ಸಾಮಥ್ರ್ಯದ ಮಿತಿ ಬಲು ಕಿರಿಯದು. ಅನುಮಾನಾಸ್ಪದವಾಗಿ ಸಂಚರಿಸುವ ಮತ್ತು ಅಪರಾಧವೆಸಗಲು ಹೊಂಚು ಹಾಕುವ ನಾಗರಿಕರನ್ನು ವ್ಯಕ್ತಿ ಸ್ವಾತಂತ್ರ್ಯೋಲ್ಲಂಘನೆ ಮಾಡದೆ ತಡೆಗಟ್ಟುವುದಾದರೂ ಹೇಗೆ? ಕಳ್ಳತನದಂಥ ಅಪರಾಧ ಸಂಭವಿಸಿದ ಮೇಲೆಯೂ ಕಳ್ಳ ಮಾಲುಗಳನ್ನು ಪತ್ತೆ ಹಚ್ಚುವ ಮತ್ತು ಪತ್ತೆ ಹಚ್ಚಿದ ಬಳಿಕ ಅಪರಾಧವನ್ನು ಕಾನೂನುಬದ್ಧವಾಗಿ ಸಾಬೀತುಗೊಳಿಸುವ ವಿಧಾನಗಳು ಅತಿ ಕ್ಲಿಷ್ಟವಾದವು. ಹೀಗಾಗಿ, ಮುಂದುವರಿದ ದೇಶಗಳಲ್ಲೂ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ಅಪರಾಧಗಳ ಪೈಕಿ ಶೇಕಡ 20 ರಷ್ಟು ಬಯಲಿಗೇ ಬರುವುದಿಲ್ಲ. ಇನ್ನು ಬೃಹತ್ ಪ್ರಯತ್ನದಿಂದ ಅಪರಾಧವನ್ನು ಪತ್ತೆ ಹಚ್ಚಿದ ದೃಷ್ಟಾಂತದಲ್ಲೂ ಸಿಕ್ಕಿ ಬಿದ್ದು ಸಜೆ ಅನುಭವಿಸುವ ಅಪರಾಧಿಗಳ ಕುಟುಂದವರು ಪೊಲೀಸರನ್ನು ತಮ್ಮ ಶತ್ರುಗಳೆಂದೇ ಭಾವಿಸುತ್ತಾರೆ. ಅವರ ಮಕ್ಕಳು ಒಟ್ಟು ಸಮಾಜದ ವಿರುದ್ಧ ದ್ವೇಷಾಸೂಯೆಗಳನ್ನು ಬೆಳೆಸಿಕೊಂಡು ಬರುವುದೂ ಅಪರೂಪವಲ್ಲ. 

	ಹೀಗೆ ಪೊಲೀಸ್ ಕರ್ತವ್ಯದ ವಾತಾವರಣವೇ ಒಂದು ತೆರನಾದ ಕಲ್ಮಷಯುತವಾದದ್ದು: ಕರ್ತವ್ಯ ನಿರ್ವಹಿಸದಿದ್ದರೆ ಅದು ಸಮಾಜ ದ್ರೋಹವಾಗುತ್ತದೆ, ಕರ್ತವ್ಯ ಭಂಗವಾಗುತ್ತದೆ, ಅಶಿಸ್ತಾಗುತ್ತದೆ: ಕರ್ತವ್ಯ ನಿರ್ವಹಿಸಿದರೆ ಅದು ಅಪರಾಧಿಗಳ ದೃಷ್ಟಿಯಿಂದ ಅಸಹನೀಯವಾಗುತ್ತದೆ, ಅತಿರೇಕ ಕ್ರೌರ್ಯವಾಗುತ್ತದೆ, ನಿರಂಕುಶ ವರ್ತನೆಯಾಗುತ್ತದೆ. ಕರ್ತವ್ಯ ನಿರ್ವಹಣೆಯ ಬಿರುಸಿನ ವೇಳೆಯಲ್ಲಿ ಕಾನೂನಿನ ಚೌಕಟ್ಟನ್ನು ಉಲ್ಲಂಘಿಸುವ ಸಾಧ್ಯತೆ ಇದ್ದೇ ಇದೆ. ಬಲಪ್ರಯೋಗ ಅನಿವಾರ್ಯವಾದಲ್ಲಿ ಪ್ರಹಾರದ ಮಿತಿಯನ್ನು ನಿರ್ಧರಿಸುವುದು ಬಲು ಕಷ್ಟವಾಗುತ್ತದೆ. ಮುಖ್ಯವಾಗಿ ಸಮಾಜದ ಬಿಡಿ ಘಟಕವಾದ ವ್ಯಕ್ತಿಯ ವಿಕಾಸ ಅಗತ್ಯ. ವಾಕ್‍ಸ್ವಾತಂತ್ರ್ಯವನ್ನು ಉಪಯೋಗಿಸಿಕೊಳ್ಳುವವರೂ ಮತ್ತು ವ್ಯಕ್ತಿಯ ಇತರ ವ್ಯವಹಾರಗಳ ಬಗೆಗಿನ ಸ್ವಾತಂತ್ರ್ಯವನ್ನು ಅನುಭವಿಸುವವರೂ ತಮ್ಮ ನಡವಳಿಕೆಗಳಿಂದ ಸಮಾಜದ ಒಟ್ಟು ಸ್ವಾಸ್ಥ್ಯಕ್ಕೆ ಭಂಗ ಬರಬಾರದು ಎಂಬ ಜವಾಬ್ದಾರಿಕೆಯ ಮನೋಭಾವ ತಳೆಯುವ ತನಕವೂ-ಆ ಮಟ್ಟದ ಉನ್ನತ ರಾಜಕೀಯ ಪ್ರಜ್ಞೆ ವಿಕಸಿಸುವ ತನಕವೂ-ಸಮಾಜದಲ್ಲಿ ಈ ದ್ವಂದ್ವ ಇದ್ದದ್ದೇ. ಪ್ರತಿಯೊಬ್ಬ ನಾಗರಿಕನೂ ತನ್ನ ಅಥವಾ ಸಾರ್ವಜನಿಕ ಆಸ್ತಿಪಾಸ್ತಿ ಬಗ್ಗೆ ಹೊಂಚು ಸಂಚು ಹಾಕುವವರ ಕಾರ್ಯಸ್ಥಾನಗಳು ತನಗೆ ತಿಳಿದಾಗ ಅದನ್ನು ಯುಕ್ತ ವೇಳೆಯಲ್ಲಿ ಪೊಲೀಸರಿಗೆ ಸಮಾಚಾರ ಕೊಡುವಷ್ಟು ಜವಾಬ್ದಾರಿಕೆಯಿಂದ ವರ್ತಿಸುವುದು ಅಗತ್ಯ. ಇಲ್ಲವಾದರೆ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ಅಪರಾಧಗಳನ್ನು ನಿಲ್ಲಿಸಲಾಗುವುದಿಲ್ಲ. ಇಲ್ಲಿಗೆ ಮುಗಿಯಲಿಲ್ಲ. ಅಪರಾಧಿಗಳನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರು ಕಾನೂನಿನ ಪ್ರಕಾರ ಮುಂದಿನ ನ್ಯಾಯಾಲಯ ಪ್ರಕರಣಗಳನ್ನು ಜರುಗಿಸುವಾಗ ಅವರಿಗೆ ನೆರವು ನೀಡುವುದೂ ಕೂಡ ಸಾರ್ವಜನಿಕರ ಕರ್ತವ್ಯ. ಉದಾಹರಣೆಗೆ ಅಪರಾಧದ ಬಗ್ಗೆ ತಮಗೆ ತಿಳಿದುದ್ದನ್ನು ಸತ್ಯವಾಗಿ ಸಾಕ್ಷ್ಯ ನುಡಿದು ಸಹಕರಿಸುವುದು ನಾಗರಿಕರ ಕರ್ತವ್ಯವೆಂಬ ಪ್ರಜ್ಞೆ ಬೆಳೆಯಬೇಕು. ನಾಗರಿಕರು ಮತ್ತು ಪೊಲೀಸರು ಸಂಯಮದಿಂದ ಸತತ ಪ್ರಯತ್ನ ನಡೆಸಿದಾಗ ಮಾತ್ರ ಸಮಾಜದಲ್ಲಿ ಶಾಂತಿಯುತ ವಾತಾವರಣ ತಲೆದೋರಿ ಅಪರಾಧ ರಾಹಿತ್ಯದ ಬೀಡು ಆ ನಾಡಾದೀತು. 

	ಭಾರತದಲ್ಲಿ ಪೊಲೀಸ್: ಪ್ರಪಂಚದ ಅತ್ಯಂತ ಪುರಾತನ ನಾಗರಿಕತೆಗಳ ಪೈಕಿ ಭಾರತದ್ದೂ ಒಂದು. ಇಲ್ಲಿ ಸುಮಾರು 3,000 ವರ್ಷಗಳಿಗಿಂತ ಹಿಂದೆಯೇ ಅನೇಕಾನೇಕ ರಾಜ್ಯಗಳು ಬೆಳೆದು ಜ್ಞಾನವಿಜ್ಞಾನಗಳಲ್ಲಿ ಮಹತ್ತರ ಸಾಧನೆಗಳು ಸಿದ್ಧಿಸಿರುವುದನ್ನು ನೋಡಿದರೆ ಅಚ್ಚರಿ ಎನಿಸುತ್ತದೆ. ತುಂಬ ಶಾಂತ ಸಮಾಜಗಳು ಇಲ್ಲಿ ಬೆಳೆದಿದ್ದುವು. ಆದರೆ, ಈ ಸಮಾಜಗಳಲ್ಲಿ ಆಂತರಿಕ ಶಾಂತಿ ಸ್ಥಾಪನೆಗೆ ಯಾವ ಬಗೆಯ ಏರ್ಪಾಡು ಅಥವಾ ಯಾವ ರೂಪದ ಸಂಸ್ಥೆಗಳು ಇದ್ದುವೆಂಬುದರ ಬಗ್ಗೆ ಯಾವ ಮಾಹಿತಿಯೂ ಖಚಿತವಾಗಿ ತಿಳಿದುಬಂದಿಲ್ಲ. ವೇದಗಳ ಕಾಲದಿಂದಲೂ ಅಲ್ಲಲ್ಲಿ ನೆಲೆಸಿದ್ದ ಗ್ರಾಮ ಗಣತಂತ್ರಗಳಲ್ಲಿ ಸೇನಾನಿ, ಗ್ರಾಮಣಿ ಮತ್ತು ಪುರೋಹಿತರೆಂಬ ಮೂರು ಅಧಿಕಾರಿಗಳಿದ್ದುದು ತಿಳಿದುಬರುತ್ತದೆ. ಇವರ ಪೈಕಿ ಗ್ರಾಮಣಿಯ ಕಾರ್ಯ ಆಂತರಿಕ ಶಾಂತಿ ಪರಿಪಾಲನೆಯೆಂದು ಕಾಣುತ್ತದೆ. ಅಶೋಕನ ಕಾಲದಷ್ಟು ಹಿಂದೆಯೇ ಈ ಅಧಿಕಾರಿ ಅತಿ ಮುಖ್ಯನಾಗಿದ್ದನೆಂದು ತಿಳಿದುಬರುತ್ತದೆ. ರಾಮಾಯಣದಲ್ಲಿ ಯೋಧರ ಅಸ್ತ್ರಶಸ್ತ್ರಗಳ, ಅವರು ಬಳಸುತ್ತಿದ್ದ ರಥಗಳ ಮತ್ತಿತರ ಸಲಕರಣೆಗಳ ವಿವರಗಳಿವೆ. ಅಲ್ಲದೆ, ರಾತ್ರಿ ವೇಳೆ ಪಟ್ಟಣಗಳಲ್ಲಿ ಪಂಜು ಹಿಡಿದು ತಿರುಗಾಡುತ್ತಿದ್ದ ದಂಡಾಯುಧಧರರ ವಿಶ್ಲೇಷಣೆಯೂ ಉಂಟು. ಗೂಢಾಚಾರರು ಸದಾ ಕಾಲದಲ್ಲೂ ಊರುಗಳಲ್ಲಿ ತಿರುಗಿ ಜನರ ಸಮಸ್ಯೆ ಮತ್ತು ಅಭಿಪ್ರಾಯಗಳನ್ನು ರಾಜರಿಗೆ ತಿಳಿಸುತ್ತಿದ್ದರೆಂಬುದೂ ರಾಮಾಯಣದಲ್ಲೂ ಕಾಳಿದಾಸನ ಶಾಕುಂತಳ ನಾಟಕದಲ್ಲೂ ಉಲ್ಲೇಖಿತವಾಗಿದೆ. ಹೀಗೆ ಹಳ್ಳಿ ಹಳ್ಳಿಗಳಲ್ಲಿ ಸ್ಥಳೀಯವಾಗಿ ನಿಯೋಜಿತವಾಗಿದ್ದು ಸಣ್ಣ ಕಾವಲುಗಾರ ವ್ಯವಸ್ಥೆಗಳಿದ್ದವೆಂದು ಕಾಣುತ್ತದೆ. ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಲ್ಲಿ ಕೌಟಿಲ್ಯ ರಚಿಸಿದ ಅರ್ಥಶಾಸ್ತ್ರ ಗ್ರಂಥದಲ್ಲಿ (ಕೌಟಲೀಯ ಅರ್ಥಶಾಸ್ತ್ರವೆಂದೂ ಇದಕ್ಕೆ ಹೆಸರುಂಟು) ಕಂಟಕ ಶೋಧನಂ ಎಂಬ ಪ್ರಕರಣದಲ್ಲಿ ತಸ್ಕರ ಶೋಧನೆ ಮತ್ತು ಇತರ ಸಾಮಾಜಿಕ ಅಪರಾಧಗಳ ಶೋಧನೆ ಹೇಗೆ ಆಗಬೇಕು ಎಂಬ ವಿವರಗಳು ಸೂತ್ರ ರೂಪದಲ್ಲಿ ದೊರೆಯುತ್ತವೆ. ಕಂಟಕ ಶೋಧನೆಯಲ್ಲಿ ನಿಯುಕ್ತರಾದವರಿಗೆ ಪ್ರದೇಷ್ಟಾರರೆಂದೂ ಹೆಸರು. ಸಮಾಜ ಕಂಟಕರಿಗೆ ಏನು ಶಿಕ್ಷೆ ವಿಧಿಸಬೇಕೆಂದು ಆ ಗ್ರಂಥದಲ್ಲಿ ನಿರೂಪಿಸಲಾಗಿದೆ. ಆದರೆ, ಈ ವಿಧಿಗಳನ್ನು ಆಚರಣೆಗೆ ತರಬಲ್ಲ ಎಂಥ ವ್ಯವಸ್ಥೆ ಇತ್ತು ಅದರ ಆಡಳಿತ ಹೇಗಿತ್ತು ಎಂಬ ವಿವರಗಳು ದೊರೆಯುತ್ತಿಲ್ಲ.

	ಮೊಗಲರ ರಾಜ್ಯ ಸ್ಥಾಪನೆಯಾದ ಬಳಿಕ ಅವರು ಜಮೀನ್ದಾರಿ ಪದ್ಧತಿಯನ್ನು ಭೂಕಂದಾಯ ವಸೂಲಿಗಳಲ್ಲದೆ, ಸ್ಥಳೀಯ ಶಾಂತಿಪರಿಪಾಲನೆಗಾಗಿಯೂ ಸ್ಥಾಪಿಸಿದರು. ಈ ಪದ್ಧತಿಯಂತೆ ಪ್ರತಿಯೊಬ್ಬ ಜಮೀನ್ದಾರನೂ ತನ್ನ ಪ್ರದೇಶದಲ್ಲಿ ಆಗುತ್ತಿದ್ದ ಕಳ್ಳತನ ದರೋಡೆ ಇತ್ಯಾದಿ ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿತ್ತು. ಇಲ್ಲವಾದರೆ ಕಳುವಾದ ಮಾಲಿನ ಬೆಲೆಯನ್ನು ಕಳೆದುಕೊಂಡವನಿಗೆ ಕೊಡಬೇಕಾಗಿತ್ತು. ಈ ಕಾರ್ಯಕ್ಕೆ ಅವನು ಸಾಕಷ್ಟು ಸಿಬ್ಬಂದಿ ಇಟ್ಟಿದ್ದ. ಕಂದಾಯ ವಸೂಲಿ ಮತ್ತು ಪತ್ತೇದಾರಿ ಕೆಲಸ ಎರಡನ್ನೂ ಈ ಸಿಬ್ಬಂದಿ ವರ್ಗದವರು ಮಾಡುತ್ತಿದ್ದರು. ಆದರೆ, ರೈತರು ಜಮೀನ್ದಾರನ ಕೇವಲ ಜೀತದಾಳುಗಳಾಗಿದ್ದುದರಿಂದ ಅವರಿಗೆ ಯಾವ ಸ್ವಾತಂತ್ರ್ಯವೂ ಇರಲಿಲ್ಲ. ಇನ್ನು ಪಿರ್ಯಾದು ಮಾಡುವ ಅಧಿಕಾರವಾಗಲಿ ಸಾಮಥ್ರ್ಯವಾಗಲಿ ಇರಲಿಲ್ಲವೆಂಬುದು ಕಂಡಂತೆಯೇ ಇದೆ. ಬೇರೆ ಊರುಗಳಿಂದ ದಂಡು ಕಟ್ಟಿಕೊಂಡು ಲೂಟಿ ಮಾಡಲು ಬರುತ್ತಿದ್ದ ಅಥವಾ ಗುಪ್ತವಾಗಿ ಅಪರಾಧವೆಸಗಲು ಬರುತ್ತಿದ್ದ ಜನರನ್ನು ಹಿಡಿಯುವ ಪೊಲೀಸ್ ಕೆಲಸವೊಂದನ್ನೇ ಜಮೀನ್ದಾರನ ಭೃತ್ಯರು ಮಾಡುತ್ತಿದ್ದುದಾಗಿತ್ತು. ಮುಖ್ಯ ಪಟ್ಟಣಗಳಲ್ಲಿ ಕೊತವಾಲರನ್ನೂ ಪ್ರಾದೇಶಿಕ ವಿಭಾಗಗಳಲ್ಲಿ ಫೌಜುದಾರನೆಂಬ ಸೈನ್ಯದ ಅಧಿಕಾರಿಯನ್ನು ನೇಮಿಸಿ ದಂಗೆ, ದರೋಡೆ ಇತ್ಯಾದಿ ಪ್ರಕರಣಗಳು ನಡೆದಾಗ ಸೈನ್ಯವನ್ನು ನಿರಾಳವಾಗಿ ಕಾರ್ಯಾಚರಣೆಗೆ ಹಚ್ಚಲಾಗುತ್ತಿತ್ತು. ಹೀಗೆ ಮೊಗಲರ ಆಡಳಿತೆಯಲ್ಲಿ ಜನರ ದೃಷ್ಟಿಯಿಂದ ಅತ್ಯಂತ ಕರಾಳವಾದ ಅಂಶವೆಂದರೆ ಆಂತರಿಕ ಅಭದ್ರತೆ ಎಂಬುದು ಇತಿಹಾಸಜ್ಞರ ಮತ. 

	ಬ್ರಿಟಿಷರು ಮೆಲ್ಲಮೆಲ್ಲಗೆ ಭಾರತ ದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ಸುಮಾರು 200 ವರ್ಷಗಳ ತನಕವೂ ದೇಶದ ಆಂತರಿಕ ಸುಭದ್ರತೆಗೆ ಮೊಗಲರ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಬಂದರು. ಈ ಕಾರ್ಯಕ್ಕೆ ಕೈಹಾಕಲು ಅವರು ಯಾವಾಗಲೂ ನಿರುತ್ಸಾಹಿಗಳಾಗಿಯೇ ಇದ್ದರು. ಆದರೆ, ಸ್ಥಳೀಯ ರಾಜ್ಯಗಳು ಒಂದೊಂದಾಗಿ ಬಿದ್ದು ಅರಾಜಕತ್ವ, ಡಕಾಯ್ತಿ, ದರೋಡೆ, ಲೂಟಿ, ಮೋಸ, ಖೂನಿ ಮುಂತಾದ ಹೇಯ ಕೃತ್ಯಗಳು ಅಡ್ಡಿಯಿಲ್ಲದೆ ಸರ್ವತ್ರ ವ್ಯಾಪಿಸಿದಾಗ ಖುದ್ದು ತಮ್ಮ ಅಸ್ತಿತ್ವಕ್ಕೆ ಸಂಚಕಾರ ಒದಗಲಿದೆ ಎಂದು ಬ್ರಿಟಿಷರಿಗೆ ಮನವರಿಕೆ ಆಯಿತು. ಆಗ ಅವರು ಆಂತರಿಕ ಸುವ್ಯವಸ್ಥೆಯ ಕಡೆ ಗಮನ ಹರಿಸುವುದು ಅನಿವಾರ್ಯವಾಯಿತು. ಸುಮಾರು ಐವತ್ತು ವರ್ಷಗಳಿಗೂ ಮಿಕ್ಕಿ ಅಲ್ಲಲ್ಲಿ ವಿಶೇಷ ಕ್ರಮವೇನೂ ಇಲ್ಲದೆ ಸೈನ್ಯ ರೂಪದ ಪಡೆಗಳನ್ನು ರೂಪಿಸಿ ಅವುಗಳ ನಿರ್ದೇಶನ ಮತ್ತು ಮೇಲ್ವಿಚಾರಣೆಯನ್ನು ಅನುಕೂಲತೆಗೆ ಅನುಗುಣವಾಗಿ ಸ್ಥಳೀಯ ಕಂದಾಯ ಅಥವಾ ನ್ಯಾಯಾಂಗ ಇಲಾಖೆಯ, ಅಥವಾ ನೇರವಾಗಿ ಕೇಂದ್ರ ಸರ್ಕಾರದ ಅಥವಾ ಸ್ಥಳೀಯ ಸರ್ಕಾರದ ಅಧಿಕಾರಿಗಳಿಗೆ ವಹಿಸಿ ಬಗೆ ಬಗೆಯ ಏರ್ಪಾಡುಗಳನ್ನು ಮಾಡಿ ಖೂನಿ, ದರೋಡೆ ಮುಂತಾದ ಸಾಮೂಹಿಕ ಹೀನ ಕೃತ್ಯಗಳನ್ನು ತಡೆಗಟ್ಟಲು ಪ್ರಯತ್ನಿಸಿದರು. ಆದರೆ, ಈ ವ್ಯವಸ್ಥೆಗಳಿಂದ ಸಮಸ್ಯೆ ಸುಧಾರಿಸಲಿಲ್ಲ. ಆದ್ದರಿಂದ ಸಮಗ್ರ ಭಾರತಕ್ಕೆ ಅನ್ವಯಿಸುವಂತೆ, ಒಂದು ಪೊಲೀಸ್ ವ್ಯವಸ್ಥೆಯನ್ನೇ ಕಟ್ಟಬೇಕೆಂದು ನಿರ್ಧರಿಸಲಾಯಿತು. ಆ ವೇಳೆಗೆ ಇಂಗ್ಲೆಂಡಿನಲ್ಲಿ ಪೊಲೀಸ್ ವ್ಯವಸ್ಥೆ ಏರ್ಪಾಟು ಆಂತರಿಕ ಶಾಂತಿ ಪರಿಪಾಲನೆ ಮತ್ತು ಅಪರಾಧ ನಿರೋಧದಲ್ಲಿ ಸಾಕಷ್ಟು ಯಶಸ್ವಿಯಾಗಿತ್ತಲ್ಲದೆ ಪೊಲೀಸ್ ವ್ಯವಸ್ಥೆಯ ಪ್ರತಿರೂಪ ಅಥವಾ ಮಾದರಿಯೂ ಸಿದ್ಧವಾಗಿತ್ತು.

	1843ರಲ್ಲಿ ಸಿಂಧ್ ದೇಶವನ್ನು ವಶಪಡಿಸಿಕೊಂಡ ಚಾಲ್ರ್ಸ್ ನೇಪಿಯರ್ ಎಂಬಾತ ಅಲ್ಲಿಯ ದೈನಿಕ ಪೊಲೀಸ್ ಕಾರ್ಯಗಳಿಗಾಗಿ ಸೈನ್ಯದ ಒಂದು ಸಣ್ಣ ತುಕಡಿಯನ್ನು ಮಾತ್ರ ನಿಯೋಜಿಸಿದ್ದ. ಈ ಸಿಬ್ಬಂದಿ ವರ್ಗಕ್ಕೆ ಬೇರೆ ಯಾವ ಜವಾಬ್ದಾರಿಯನ್ನು ವಹಿಸಲಿಲ್ಲ. ಆ ಮೊದಲು ಅತಿ ದೌರ್ಜನ್ಯದಿಂದ ತತ್ತರಿಸಿದ್ದ ಸಿಂಧ್ ರಾಜ್ಯದಲ್ಲಿ ನೇಪಿಯರ್ ಶಾಂತಿ ಸ್ಥಾಪಿಸುವುದರಲ್ಲಿ ಸಫಲನಾದ. ಮುಂದೆ ಸಿಂಧ್ ಪ್ರಾಂತ್ಯ ಮುಂಬಯಿ ಪ್ರಾಂತ್ಯದ ಅಂಗವಾದ ಬಳಿಕ ಇದರ ರಾಜ್ಯಪಾಲ ನೇಪಿಯರನ ಶಾಂತಿಪಾಲನಾ ವ್ಯವಸ್ಥೆಯನ್ನು ಗಮನಿಸಿ ಈ ಪ್ರಾಂತಾದ್ಯಂತವೂ ಅದೇ ರೀತಿ ವ್ಯವಸ್ಥೆ ಮಾಡಿದ.

	ಸೈನ್ಯದ ಯಾವ ಸಂಪರ್ಕವೂ ಇಲ್ಲದ ಪೊಲೀಸ್ ಪಡೆಯನ್ನು ಪ್ರಪ್ರಥಮವಾಗಿ 1859ರಲ್ಲಿ ಮದರಾಸು ಪ್ರಾಂತದಲ್ಲಿ ಒಬ್ಬ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಂಬ ಅಧಿಕಾರಿಯ ಹಿರಿತನದಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರ ಎಲ್ಲ ಪ್ರಾಂತ್ಯಗಳಲ್ಲಿಯೂ ಒಂದೇ ತರಹದ ಪೊಲೀಸ್ ವ್ಯವಸ್ಥೆ ಇರಲೆಂದು ಯೋಜಿಸಿ ಅದರ ಬಗ್ಗೆ ಶಿಫಾರಸು ಮಾಡಲು ಒಂದು ಸಮಿತಿಯನ್ನು ನೇಮಕ ಮಾಡಿತು. ಸಮಿತಿ ಕೇವಲ ಒಂದೇ ತಿಂಗಳಿನಲ್ಲಿ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಒಪ್ಪಿಸಿತು. ಸರ್ಕಾರ ದೇಶಾದ್ಯಂತ ಇರಬೇಕಾದ ಪೊಲೀಸ್ ವ್ಯವಸ್ಥೆಯ ರೂಪುರೇಖೆಗಳನ್ನೂ 22-3-1861 ರಂದು ಸುಗ್ರೀವಾಜ್ಞೆಯ ಮೂಲಕ ಘೋಷಿಸಿತು. ಅದರ ಮುಖ್ಯ ಲಕ್ಷಣಗಳಿವು:

	1. ಪೊಲೀಸ್ ವ್ಯವಸ್ಥೆ ಭಾರತಾದ್ಯಂತ ಸರ್ಕಾರದ ಹೊಣೆಯಾಗಿರತಕ್ಕದ್ದು.

	2. ಪ್ರತಿಯೊಂದು ಪ್ರಾಂತ್ಯಕ್ಕೂ ಒಂದೇ ಒಂದು ಪೊಲೀಸ್ ವ್ಯವಸ್ಥೆಯಿದ್ದು ಅದು ಒಬ್ಬ ಐಜಿಪಿಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸತಕ್ಕದ್ದು.

	3. ಪೊಲೀಸ್ ವ್ಯವಸ್ಥೆಗೆ ಯಾವುದೇ ರಾಜಸ್ವ (ರೆವಿನ್ಯೂ), ನ್ಯಾಯಾಂಗ ಅಥವಾ ಸೇನಾ ಕರ್ತವ್ಯ ಇರತಕ್ಕದ್ದಲ್ಲ. ಅಪರಾಧ ನಿರೋಧ ಮತ್ತು ಪತ್ತೇದಾರಿ ಇವೆರಡೇ ಪೊಲೀಸರ ಕರ್ತವ್ಯಗಳಾಗಿರತಕ್ಕದ್ದು. 

	4. ಆಂತರಿಕ ಗಲಭೆಗಳು ಪೊಲೀಸರ ಹತೋಟಿ ಮೀರಿ ವ್ಯಾಪಕವಾಗಿ ದಂಗೆಯ ಸ್ವರೂಪವನ್ನೂ ಗಾತ್ರವನ್ನೂ ತಳೆದರೆ ಆಗ ಮಾತ್ರ ಕಾನೂನಿನಲ್ಲಿ ನಿರೂಪಿಸಿರುವಷ್ಟು ಮಟ್ಟಿಗೆ ಸೈನ್ಯದ ನೆರವನ್ನು ಪಡೆಯಬಹುದು.

	5. ಸ್ಥಳೀಯ, ಅಂದರೆ ಪ್ರಾಂತ್ಯಗಳ ಸರ್ಕಾರಗಳು ನಿವೇಶನಗಳಲ್ಲಿ ಪೊಲೀಸ್ ಠಾಣೆಗಳನ್ನು ನಿರ್ಮಿಸಿ, ಅಲ್ಲಿ ಅಗತ್ಯವಾದಷ್ಟು ಪೊಲೀಸ್ ಪೇದೆಗಳನ್ನು ನೇಮಿಸಿ ಕರ್ತವ್ಯ ನಿರ್ವಹಿಸತಕ್ಕದ್ದು. 

	1861ರ ಕಾಯಿದೆ ಭಾರತಕ್ಕೆಲ್ಲ ಅನ್ವಯಿಸುವಂತೆ ಜಾರಿಯಾಗದಿದ್ದರೂ ಅದು ನಿರ್ದೇಶಿಸಿದ ಮಾರ್ಗದಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ದೇಶೀಯ ರಾಜರುಗಳ ಸಂಸ್ಥಾನಗಳಲ್ಲಿಯೂ ಪೊಲೀಸ್ ಸಂಸ್ಥೆಗಳನ್ನು ರೂಪಿಸಲಾಯಿತು. ಮುಂದೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಗಳಾಗಿದ್ದರೂ ಮುಖ್ಯವಾಗಿ ಈಗಲೂ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಪೊಲೀಸ್ ಸಂಸ್ಥೆಗಳು ಅದೇ ಅಡಿಗಲ್ಲಿನ ಮೇಲೆ ನಿಂತು ಬೆಳೆದುಬಂದಿವೆ. 

	ಪ್ರಪಂಚದ ನಾನಾ ದೇಶಗಳಲ್ಲಿ ರಾಜಕೀಯ ಬೆಳವಣಿಗೆಗಳು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸಿ ಅವುಗಳ ಸ್ವರೂಪಗಳು ಬೇರೆ ಬೇರೆ ಆಗಿರುವುದರಿಂದ ಒಳಾಡಳಿತ ವಿಧಾನಗಳು, ಅದರಲ್ಲೂ ಪೊಲೀಸ್ ಸಂಸ್ಥೆಗಳ ರೂಪುರೇಖೆಗಳು, ಕಾರ್ಯನಿರೂಪಣೆಯ ಪದ್ಧತಿಗಳು ಮತ್ತು ಉದ್ದೇಶಗಳು ವಿವಿಧ ರೀತಿಯವಾಗಿರುತ್ತವೆ. ಸಂಪೂರ್ಣವಾಗಿ ಕೇಂದ್ರೀಕೃತವಾದ ಪೊಲೀಸ್ ಸಂಸ್ಥೆಗಳು ಫ್ರಾನ್ಸ್ ದೇಶದಲ್ಲಿವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪೊಲೀಸ್ ವ್ಯವಸ್ಥೆ ಹಲವಾರು ಸ್ವಾತಂತ್ರ ಘಟಕಗಳ ಮೇಳ. ಒಂದೊಂದು ಘಟಕದಲ್ಲಿಯೇ ಇಬ್ಬರು ಇಲ್ಲವೇ ಮೂವರು ಅಷ್ಟೇನೂ ಹೆಚ್ಚಿನ ಶಿಕ್ಷಣ ಪಡೆದಿರದ ಪೇದೆಗಳಿರುತ್ತಾರೆ. ಹೀಗೆ ಫ್ರಾನ್ಸ್ ಕೇಂದ್ರೀಕರಣವೆಂಬ ಒಂದು ಕೊನೆಯಲ್ಲಿದ್ದರೆ ಅಮೆರಿಕ ವಿಕೇಂದ್ರೀಕರಣವೆಂಬ ಇನ್ನೊಂದು ಕೊನೆಯಲ್ಲಿದೆ. ಭಾರತ ಇವೆರಡೂ ಅತಿಗಳ ನಡುವಿನಲ್ಲಿದೆ. ಇಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರವೂ ಸಂವಿಧಾನರೀತ್ಯಾ ಸ್ವಂತ ಪೊಲೀಸ್ ಪಡೆಗಳನ್ನು ಹೊಂದಿದೆ. ಭಾರತದ ರಾಜ್ಯಗಳೂ ವಿಶಾಲ, ಪ್ರಜಾಸಂಖ್ಯೆ ಅಧಿಕ, ಸಮಸ್ಯೆಗಳು ವಿಪುಲ. ಹೀಗಿರುವುದರಿಂದ ಈ ತೆರನಾದ ಏರ್ಪಾಡು ಆಡಳಿತ ದೃಷ್ಟಿಯಿಂದ ಅನುಕೂಲವಾದುದ್ದಾಗಿದ್ದು ದಕ್ಷ ಕಾರ್ಯನಿರ್ವಹಣೆಗೆ ಉಪಯುಕ್ತವಾಗಿದೆ. ಪ್ರಪಂಚಾದ್ಯಂತ ಇದೇ ತೆರೆನಾದ ಮಾದರಿ ಹೆಚ್ಚಾಗಿ ಎಲ್ಲೆಲ್ಲೂ ಕಾರ್ಯರೂಪಕ್ಕೆ ಬರುತ್ತಿದೆ. 1829ರಲ್ಲಿ ಇಂಗ್ಲೆಂಡಿನಲ್ಲಿ 350 ಸ್ವತಂತ್ರ ಪೊಲೀಸ್ ಪಡೆಗಳಿದ್ದವು. ಕ್ರಮೇಣ ಈ ಸಣ್ಣ ಸಣ್ಣ ಪಡೆಗಳನ್ನು ಒಂದುಗೂಡಿಸುತ್ತ ಒಂದು ಈಗ (1982ರಲ್ಲಿ) ಅಲ್ಲಿ ಕೇವಲ 45 ಸಂಸ್ಥೆಗಳಿವೆ. 40,000 ಕ್ಕೂ ಹೆಚ್ಚು ಪರಸ್ಪರ ಸ್ವತಂತ್ರ ಪೊಲೀಸ್ ಪಡೆಗಳಿದ್ದ ಅಮೆರಿಕ ದೇಶದಲ್ಲಿಯೂ ರಾಜ್ಯ ಪೊಲೀಸ್ ಸಂಸ್ಥೆಗಳು ಹುಟ್ಟಿ ಅತಿ ಜನಸಂದಣಿಯಿರುವ ಪಟ್ಟಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಪಡೆಗಳನ್ನು ಒಂದುಗೂಡಿಸಲಾಗುತ್ತಿದೆ. 

	ಕೇಂದ್ರೀಯ ಪೊಲೀಸ್ ಸಂಘಟನೆಗಳು: ಭಾರತೀಯ ಸಂವಿಧಾನದ ಪ್ರಕಾರ ಪೊಲೀಸ್ ಎಂಬುದು ರಾಜ್ಯಸಂಬಂಧ ವಿಷಯ. ಆದರೆ, ರಾಷ್ಟ್ರದ ಭದ್ರತೆ ರಾಷ್ಟ್ರೀಯ ಸರ್ಕಾರದ ಹೊಣೆ, ಅಲ್ಲದೆ ಅಪರಾಧ ಸುಳುಹು ಮತ್ತು ಶೋಧನೆ ಎಂಬ ವಿಷಯ ಸಂವಿಧಾನದ ಸಹಗಾಮಿ ಪಟ್ಟಿಯಲ್ಲಿ ಸೇರಿದೆ. ಇವುಗಳ ಜೊತೆಗೆ ಅಖಿಲ ಭಾರತ ಸೇವಾ ವ್ಯವಸ್ಥೆಗೆ ಅಧಿಕಾರಿಗಳನ್ನು ತರಬೇತಿಸುವ ಹೊಣೆಯನ್ನು ಸಂಸತ್ತು ಕೇಂದ್ರ ಸರ್ಕಾರಕ್ಕೆ ವಹಿಸಿದೆ. ಅಂದ ಮೇಲೆ ದೇಶಕ್ಕೆ ಪೊಲೀಸ್ ರಕ್ಷಣೆ ಒದಗಿಸುವಲ್ಲಿ ಕೇಂದ್ರದ ಹೊಣೆ ಮಹತ್ತರವಾಗಿದೆ ಎಂಬುದು ನಿಸ್ಸಂದೇಹ.

	ರಾಷ್ಟ್ರೀಯ ಭಧ್ರತೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಗಡಿ ಭದ್ರತಾ ಪಡೆಯೆಂಬ ಅರೆಸೈನಿಕ ಬಲವನ್ನು ರೂಪಿಸಿದೆ. ಇದರ ತುಕ್ಕಡಿಗಳು ರಾಷ್ಟ್ರದ ಗಡಿಗಳನ್ನು ರಕ್ಷಿಸುವುದರ ಜೊತೆಗೆ ಗಡಿಯಲ್ಲಿ ಕಳ್ಳಸಾಗಣಿ ತಡೆಯುವ ಹೊರನಾಡಿಗರ ಅಕ್ರಮ ಪ್ರವೇಶ ತಡೆಗಟ್ಟುವ, ಮತ್ತು ಗಡಿಗಳಲ್ಲಿ ಸಂಭವಿಸಬಹುದಾದ ಲಘು ಹೊಡೆದಾಟಗಳನ್ನು ನಿವಾರಿಸುವ ಜವಾಬ್ದಾರಿಕೆ ಕೂಡ ಹೊತ್ತುಕೊಂಡಿವೆ. ಸೇನಾಬಲಗಳ ವೃತ್ತಿ ಯೋಧರನ್ನು ಈ ಕಿರಿಕಿರಿಗಳ ದಮನಕ್ಕೆ ನಿಯೋಗಿಸುವುದು ಅಪೇಕ್ಷಣೀಯವಲ್ಲ. ಏಕೆಂದರೆ ಆಗ ಪರಿಸ್ಥಿತಿ ವೃಥಾ ವಿಷಮಿಸುವ ಅಪಾಯ ಉಂಟು. 

	ಭದ್ರತ ನಿರ್ದೇಶನಾಲಯ (ಡೈರೆಕ್ಟೋರೇಟ್ ಆಫ್ ಸೆಕ್ಯುರಿಟಿ) ಮತ್ತು ಭಾರತ ಟಿಬೆಟ್ ಗಡಿ ಪೊಲೀಸ್ ಎಂಬ ಇನ್ನೆರಡು ಕೇಂದ್ರೀಯ ಸಂಘಟನೆಗಳೂ ಇವೆ. ಶಾಂತಿ ಭಂಗವಾಗಿ ದೇಶಕ್ಕೆ ಸವಾಲಾಗುವ ಗಡಿ ಪ್ರದೇಶಗಳನ್ನು ಕಾಯುವುದು ಇವುಗಳ ಹೊಣೆ. 

	ಈಗ ಒಂದು ಶತಮಾನಾವಧಿಗೂ ಮಿಕ್ಕಿ ಕೇಂದ್ರ ಸರ್ಕಾರ ಸೇನಾ ಸದೃಶ ವ್ಯವಸ್ಥೆಯೊಂದನ್ನು ರೂಪಿಸಿ ಬೆಳೆಸಿಕೊಂಡು ಬಂದಿದೆ. ಇದರ ಯೋಧ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೂ ಇದೆ. ರಾಜ ಪ್ರತಿನಿಧಿಗಳ ಪೊಲೀಸ್ (ಕ್ರೌನ್ ರೆಪ್ರೆಸೆಂಟಿಟ್ಯೂಸ್) ಎಂಬುದು ಈ ವ್ಯವಸ್ಥೆಗೆ ಮೊದಲಿದ್ದ ಹೆಸರು. ಸ್ವಾತಂತ್ರ್ಯಾ ನಂತರ ಇದನ್ನು ಕೇಂದ್ರ ಮೀಸಲು ಪೊಲೀಸ್ (ಸೆಂಟ್ರಲ್ ರಿಸರ್ವ್ ಪೊಲೀಸ್) ಎಂದು ಬದಲಾಯಿಸಲಾಗಿದೆ. ರಾಜ್ಯಗಳಲ್ಲಿ ಆಂತರಿಕ ಪರಿಸ್ಥಿತಿ ಹದಗೆಟ್ಟು ಸ್ಥಳೀಯ ಪೊಲೀಸ್ ಬಲಗಳ ಹತೋಟಿ ಮೀರಿದಾಗ ಅವುಗಳ ನೆರವಿಗಾಗಿ ಕೇಂದ್ರ ಸರ್ಕಾರ ಮೀಸಲು ಪೊಲೀಸ್ ದಳಗಳನ್ನು ನಿಯೋಗಿಸುವುದುಂಟು. 

	ಹೈದರಾಬಾದಿನಲ್ಲಿರುವ ರಾಷ್ಟ್ರೀಯ ಪೊಲೀಸ್ ಅಕ್ಯಾಡೆಮಿಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಇಂಡಿಯನ್ ಪೊಲೀಸ್ ಸರ್ವೀಸಿನ (ಐ.ಪಿ.ಎಸ್.) ಎಲ್ಲ ಅಧಿಕಾರಿಗಳಿಗೂ ಇಲ್ಲಿ ಶಿಕ್ಷಣ ನೀಡಲಾಗುತ್ತದೆ. ಕೇಂದ್ರ ಹಾಗೂ ರಾಜ್ಯಗಳ ಐ.ಪಿ.ಎಸ್. ಮತ್ತು ಐ.ಪಿ.ಎಸ್. - ಇತರ ಅಧಿಕಾರಿಗಳಿಗಾಗಿ ಈ ಅಕ್ಯಾಡೆಮಿ ಉನ್ನತ ಆಡಳಿತ ವಿಧಾನಗಳಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ದೇಶದೊಳಗಿನ ರಾಜಕೀಯ ಸ್ಥಿತಿಗಳನ್ನು ಗುಪ್ತವಾಗಿ ಗಮನಿಸುತ್ತ ಅವುಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯುಕ್ತ ಮಾಹಿತಿ ಸಲ್ಲಿಸಲು ಇಂಟಲಿಜೆನ್ಸ್ ಬ್ಯೂರೊ ಎಂಬ ಹೆಸರಿನ ವಿಶಾಲ ವ್ಯವಸ್ಥಾಪನೆ ಇದೆ. ವಿದೇಶಗಳಿಗೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹ. ವಿಶ್ಲೇಷಣೆ ಮತ್ತು ನಿರ್ಧರಣೆ ಮಾಡಲು ಸಂಶೋಧನೆ ಹಾಗೂ ವಿಶ್ಲೇಷಣೆ ವಿಭಾಗ (ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಇದೆ. 

	ಐ.ಪಿ.ಎಸ್. ಅಧಿಕಾರಿಗಳಿಗೆ ಆಧುನಿಕ ಅನ್ವೇಷಣ ವಿಧಾನಗಳಲ್ಲಿ ತರಬೇತಿ ನೀಡಲು ಕಲ್ಕತ್ತಾದಲ್ಲೊಂದು, ಹೈದರಾಬಾದಿನಲ್ಲೊಂದು ಹೀಗೆ ಎರಡು ಕೇಂದ್ರೀಯ ಪತ್ತೇದಾರಿ ಶಿಕ್ಷಣ ಶಾಲೆಗಳಿವೆ. ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೂ ಸಬ್ ಇನ್ಸ್‍ಪೆಕ್ಟರ್‍ಗಳಿಗೂ ಇಲ್ಲಿ ಇದೇ ಶಿಕ್ಷಣ ನೀಡಲಾಗುತ್ತದೆ. 

	ಕೇಂದ್ರ ಸರ್ಕಾರದ ಉದ್ಯಮಗಳು, ಕೈಗಾರಿಕೆಗಳು, ಆಡಳಿತ ವ್ಯವಸ್ಥಾಪನೆಗಳು ಮುಂತಾದವು ದೇಶಾದ್ಯಂತ ವ್ಯಾಪಿಸಿವೆ. ಇವುಗಳಿಗೆ ಸಂಬಂಧಿಸಿದಂತೆ ಮೋಸ ವಂಚನೆಗಳನ್ನು ತಡೆಗಟ್ಟಲು ಹಾಗೂ ಪತ್ತೆ ಹಚ್ಚಲು ಕೇಂದ್ರ ಸರ್ಕಾರ ವಿಶೇಷ ಪೊಲೀಸ್ ವ್ಯವಸ್ಥಾಪನೆಯನ್ನು (ಸ್ಪೆಶಲ್ ಪೊಲೀಸ್ ಎಸ್ಟಾಬ್ಲಿಶ್‍ಮೆಂಟ್) ಸ್ಥಾಪಿಸಿದೆ. ಕೇಂದ್ರೀಯ ಶೋಧನೆ ತಂಡ (ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ಸಿ.ಬಿ.ಐ.) ಎಂಬ ಬೃಹದ್ವ್ಯವಸ್ಥೆಯ ಅಂಗಸಂಸ್ಥೆಯಿದು. 	ಭಾರತೀಯ ಆಕಾಶ ಸಂಶೋಧನಾ ವ್ಯವಸ್ಥಾಪನೆ (ಇಸ್ರೋ). ಬಾಬಾ ಪರಮಾಣು ಸಂಶೋಧನೆ ಕೇಂದ್ರ (ಬಾರ್ಕ್) ಮುಂತಾದ ಉನ್ನತ ಸಂಶೋಧನಾತ್ಮಕ ಹಾಗೂ ಕೇವಲ ರಕ್ಷಣಾತ್ಮಕ ಔದ್ಯಮಿಕ ಕೇಂದ್ರಗಳಲ್ಲಿ ಭದ್ರತೆ ಕಾಪಾಡಲು, ಗುಪ್ತ ಮಾಹಿತಿ ಸಂರಕ್ಷಿಸಲು, ಬೇಹುಗಾರಿಕೆ ತಪ್ಪಿಸಲು ಇತ್ಯಾದಿ ಕೇಂದ್ರೀಯ ಔದ್ಯಮಿಕ ಭದ್ರತಾಪಡೆಯನ್ನು (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಈಚಿಗೆ ಸ್ಥಾಪಿಸಲಾಗಿದೆ.

	ಹೀಗೆ ಕೇಂದ್ರೀಯ ಪೊಲೀಸ್ ವ್ಯವಸ್ಥಾಪನೆಗಳ ಗಾತ್ರ ಮತ್ತು ವಿಸ್ತಾರ ಅಗಾಧವಾಗಿದೆ. ಇವೆಲ್ಲ ವ್ಯವಸ್ಥಾಪನೆಗಳಿಗೆ ಅಭ್ಯರ್ಥಿಗಳನ್ನು ಆಯಲು ವಿಭಿನ್ನ ವಿಧಾನಗಳಿವೆ. ಆಯ್ದ ಶಿಕ್ಷಣಾರ್ಥಿಗಳಿಗೆ ತರಬೇತು ನೀಡಲು ವಿಭಿನ್ನ ಕೇಂದ್ರಗಳಿವೆ. ಅವರ ಬಡ್ತಿ ಸೇವಾ ಸೌಕರ್ಯ ಮುಂತಾದವನ್ನು ಕುರಿತಂತೆ ಮಾರ್ಗದರ್ಶನ ನೀಡಲು ವಿಭಿನ್ನ ನಿಯಮಾವಳಿಗಳಿವೆ. ಎಲ್ಲವೂ ಗೃಹ ಮಂತ್ರಾಲಯದ ಸುಪರ್ದೆಯಲ್ಲಿ ನಿರ್ವಹಿಸಲ್ಪಡುತ್ತವೆ. 

	ರಾಜ್ಯ ಪೊಲೀಸ್ ಬಲಗಳ ವ್ಯವಸ್ಥಾಪನೆ: ಸಂವಿಧಾನಾತ್ಮಕವಾಗಿ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎಂಬ ಪದನಾಮ (ಡೆಸಿಗ್ನೇಶನ್) ಪಡೆದ ಒಬ್ಬ ಅಧಿಕಾರಿ ಪ್ರತಿಯೊಂದು ರಾಜ್ಯದಲ್ಲಿಯೂ ಪೊಲೀಸ್ ವ್ಯವಸ್ಥಾಪನೆಯ ಮುಖ್ಯಸ್ಥನಾಗಿರುತ್ತಾನೆ. ಕೆಲವು ರಾಜ್ಯಗಳಲ್ಲಿ ಇದೇ ದರ್ಜೆ ಮತ್ತು ಅಂತಸ್ತು ಪಡೆದಿರುವ ಸ್ಪೆಷಲ್ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಂಬ ಹುದ್ದೆಗಳನ್ನು ಈಚಿಗೆ ಸೃಷ್ಟಿಸಿ ಅವುಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ರಾಜ್ಯಗಳಲ್ಲಿಯ ಪೊಲೀಸ್ ವ್ಯವಸ್ಥಾಪನೆಯಲ್ಲಿ ಸಂಯುಕ್ತಾಧಿಕಾರ ಕಾಪಾಡಿಕೊಂಡು ಬರಲು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಎಂಬ ಉನ್ನತ ಹುದ್ದೆಯನ್ನು ಸೃಷ್ಟಿಸಲಾಗಿದೆ.

	ರಾಜ್ಯದೊಳಗೆ ಸಾರ್ವಜನಿಕ ಶಾಂತಿ ಪಾಲಿಸಲು ಮತ್ತು ಪೊಲೀಸ್ ಬಲಗಳಲ್ಲಿ ದಕ್ಷತೆ ಶಿಸ್ತು ಮತ್ತು ಧೃತಿ ಕಾಪಾಡಲು ಐಜಿಪಿ (ಅಥವಾ ಡಿಜಿಪಿ) ಅಲ್ಲಿಯ ಸರ್ಕಾರಕ್ಕೆ ಬದ್ಧನಾಗಿರುತ್ತಾನೆ. ರಾಜ್ಯದ ಸರಹದ್ದಿನ ಒಳಗೆ ಸಂಭವಿಸುವ ಸಮಸ್ತ ಘಟನೆಗಳನ್ನು ಕುರಿತಂತೆ ಪ್ರಾಥಮಿಕ ಅಧಿಕಾರ ವ್ಯಾಪ್ತಿ ಅಲ್ಲಿಯ ಸರ್ಕಾರದ ಹೊಣೆ. ಇದು ಭಾರತೀಯ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಪ್ರಾಪ್ತವಾಗಿರುವ ಅಧಿಕಾರ. ಎಂದೇ ಯಾವುದೇ ರಾಜ್ಯದಲ್ಲಿ ತಲೆ ಹಾಕುವ ಕಾನೂನು ಭಂಗವನ್ನು ಕುರಿತಂತೆ ಮೊದಲ ಕಾಳಜಿ ಅಲ್ಲಿಯ ಪೊಲೀಸಿನದು. ಹೀಗೆ ಕೇಂದ್ರೀಯ ಸಂಘಟನೆಗಳಾದ ವಿಮಾನ ನಿಲ್ದಾಣಗಳು. ಸಾರ್ವಜನಿಕ ವಲಯದ ಉದ್ಯಮಗಳು, ಕೇಂದ್ರ ಸರ್ಕಾರದ ಸ್ಥಳೀಯ ಕಚೇರಿಗಳು ಮುಂತಾದವು ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಅಪರಾಧ ನಿರೋಧ ಮುಂತಾದುವುಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯದ ಪೊಲೀಸ್ ಕಕ್ಷೆಯೊಳಗೆ ಬರುತ್ತವೆ. ಇಂತಿದ್ದರೂ ಕೇಂದ್ರೀಯ ವ್ಯವಸ್ಥಾಪನೆಗಳಲ್ಲಿ ತಲೆದೋರಬಹುದಾದ ಭ್ರಷ್ಟಾಚಾರ ಅವ್ಯವಹಾರ ಮುಂತಾದ ವಿಶೇಷ ಸಮಸ್ಯೆಗಳನ್ನು ಪರಿಹರಿಸಲೋಸ್ಕರ ಕೇಂದ್ರ ಸರ್ಕಾರ ಸ್ಥಾಪಿಸಿರುವ ಪೊಲೀಸ್ ಪಡೆಗಳಿಗೆ ರಾಜ್ಯ ಪಡೆಗಳ ಜೊತೆ ಸಹಗಾಮಿ ಅಧಿಕಾರ ಕೊಡಲಾಗಿದೆ. 

	ಐಜಿಪಿ ಅಥವಾ ಡಿಜಿಪಿ ಅಧೀನದಲ್ಲಿರುವ ರಾಜ್ಯ ಪೊಲೀಸ್ ವ್ಯವಸ್ಥಾಪನೆ ಪ್ರದೇಶಾತ್ಮಕವೂ ಹೌದು. ಕ್ರಿಯಾತ್ಮಕವೂ ಹೌದು. ಅಂದರೆ ಸಮಗ್ರ ರಾಜ್ಯವನ್ನು ಪೊಲೀಸ್ ಹೊಣೆಗಾರಿಕೆಗಳಾದ ಭದ್ರತಾ ಪಾಲನೆ, ಶಾಂತಿ ಸಂರಕ್ಷಣೆ, ವಾಹನ ನಿಯಂತ್ರಣೆ ಮುಂತಾದವನ್ನು ಅಂತೆಯೇ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಆರ್ಥಿಕ ಮಹತ್ತ್ವ ಮುಂತಾದವನ್ನು ಪರಿಗಣಿಸುತ್ತ ಅನುಕೂಲ ವಿಭಾಗಗಳಾಗಿ ಹಂಚಿ ಪೊಲೀಸ್ ಆಡಳಿತೆಯನ್ನು ಸಂಘಟಿಸಲಾಗಿದೆ. ವಿಭಾಗ ಮುಖ್ಯಸ್ಥ ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ (ಡಿಐಜಿ) ದರ್ಜೆಯ ಅಧಿಕಾರಿ ವಿಭಾಗವನ್ನು ಜಿಲ್ಲೆಗಳಾಗಿಯೂ ಜಿಲ್ಲೆಯನ್ನು ಉಪವಿಭಾಗಗಳಾಗಿಯೂ ಉಪವಿಭಾಗವನ್ನು ವೃತ್ತಗಳಾಗಿಯೂ ವೃತ್ತವನ್ನು ಠಾಣೆಗಳಾಗಿಯೂ ವಿಭಾಗಿಸಲಾಗಿದೆ. ಪೊಲೀಸ್ ವ್ಯವಸ್ಥಾಪನೆಯ ಅತ್ಯಂತ ಚಿಕ್ಕ ಘಟಕವೇ ಠಾಣೆ. ಸಬ್ ಇನ್ಸ್‍ಪೆಕ್ಟರ್ ದರ್ಜೆಯ ಅಧಿಕಾರಿ ಇದರ ಮುಖ್ಯಸ್ಥನಾಗಿರುತ್ತಾನೆ. 

	ಇಂಟರ್ಪೋಲ್: ಅಧಿಕಾರ ವ್ಯಾಪ್ತಿ ಮತ್ತು ಗಡಿ ಎಂಬ ನಿರ್ಬಂಧಗಳು ನೈಸರ್ಗಿಕವಲ್ಲ. ಮಾನವಕೃತವಾದವು. ಅಂತಾರಾಷ್ಟ್ರೀಯ ಪಾತಕಿಗಳು ಈ ಕೃತಕ ನಿರ್ಬಂಧಗಳನ್ನು ಲೆಕ್ಕಿಸುವುದಿಲ್ಲವಷ್ಟೇ ಅಲ್ಲ, ಇವನ್ನು ತಮ್ಮ ಅನುಕೂಲತೆಗೋಸ್ಕರ ಮಾರ್ಪಡಿಸಿಯೂಕೊಳ್ಳುತ್ತಾರೆ. ಒಂದು ಗಡಿಯೊಳಗೆ ಅಪರಾಧವೆಸಗಿ ಅದರ ದುರ್ಲಾಭ ಪಡೆದು ಇನ್ನೊಂದು ಗಡಿಯೊಳಗೆ ಆಸರೆ ಪಡೆಯುವುದು ಇವರ ತಂತ್ರ. ಈ ಪಾತಕಿಗಳೆದುರು ಉಭಯ ಅಧಿಕಾರ ವ್ಯಾಪ್ತಿಗಳಲ್ಲಿಯ ಪೊಲೀಸರೂ ಕಾರ್ಯ ಹೂಡಲಾರದವರಾಗಿರುತ್ತಾರೆ: ಆಯಾ ರಾಷ್ಟ್ರದ ನಿಯಮಾವಳಿಗಳ ಫಲವಿದು. 

	ಉದಾಹರಣೆಗೆ ಅಕ್ಕಪಕ್ಕದ ಎರಡು ಸ್ವತಂತ್ರ ರಾಷ್ಟ್ರಗಳಾದ ಭಾರತ ಮತ್ತು ಬಾಂಗ್ಲಾ ದೇಶ. ಭಾರತದಲ್ಲಿ ಅಪರಾಧವೆಸಗಿ ಬಾಂಗ್ಲಾ ದೇಶಕ್ಕೆ ಪಲಾಯನ ಹೂಡಿದ ಆರೋಪಿಯನ್ನು ಭಾರತೀಯ ಪೊಲೀಸರು ಬಾಂಗ್ಲಾ ದೇಶಕ್ಕೆ ಹೋಗಿ ಕೈದು ಮಾಡುವಂತಿಲ್ಲ. ಮತ್ತು ವಿಲೋಮವಾಗಿ, ಇನ್ನು ಭೌಗೋಳಿಕವಾಗಿ ದೂರದೂರದ ಊರುಗಳಾದರೆ-ಉದಾಹರಣೆಗೆ ಹಾಂಕಾಂಗ್ ಮತ್ತು ನ್ಯೂಯಾರ್ಕ್ ಅಥವಾ ಲಂಡನ್ ಮತ್ತು ಮೆಲ್ಬೋರ್ನ್-ಅಪರಾಧ ಶೋಧನೆ ಇನ್ನೂ ಜಟಿಲವಾಗುತ್ತದೆ. ವಿಮಾನಯಾನ ಸುಲಭವೂ ಕ್ಷಿಪ್ರವೂ ಅಗಿರುವ ಈ ದಿನಗಳಲ್ಲಿ ಅಂತಾರಾಷ್ಟ್ರೀಯ ಅಪರಾಧ ಬಹುರೂಪಿಯಾಗಿ ವ್ಯಾಪಿಸಿರುವುದು ಅಚ್ಚರಿಯ ಸಂಗತಿ ಅಲ್ಲ. 

	ಈ ತೆರನಾದ ಅಪರಾಧಗಳನ್ನು ತಪಾಸಿಸಿ ತಪ್ಪುಗಾರರನ್ನು ಪತ್ತೆ ಹಚ್ಚುವುದು ಯಾವುದೇ ರಾಷ್ಟ್ರದ ಪೊಲೀಸ್ ಬಲಗಳ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಗೆ ಹೊರಗಾಗುವುದರಿಂದ ಅದಕ್ಕೋಸ್ಕರವಾಗಿಯೇ ಒಂದು ಯೋಚನೆ ರೂಪಿಸಲೆಂದು ಜನಾಂಗಗಳ ಸಂಘದ (ಲೀಗ್ ಆಫ್ ನೇಶನ್ಸ್) ಹಿರಿತನದಲ್ಲಿ ಅಂತಾರಾಷ್ಟ್ರೀಯ ಪೊಲೀಸ್ ಆಯೋಗವನ್ನು ವಿಯನ್ನಾದಲ್ಲಿ ಸ್ಥಾಪಿಸಲಾಯಿತು (1920). ಎರಡನೆಯ ಮಹಾಯುದ್ಧಾನಂತರ ಅದರ ಪ್ರಧಾನ ಕಚೇರಿಯನ್ನು ಪ್ಯಾರಿಸಿಗೆ ವರ್ಗಾಯಿಸಲಾಗಿದೆ (1945). ಆಗ ಇದರ ತಂತಿ ವಿಳಾಸವಾಗಿ ಆಯ್ದ ಪದ ಇಂಟರ್‍ಪೋಲ್ (ಇಂಟರ್‍ನ್ಯಾಷನಲ್-ಪೊಲೀಸ್) ಎಂಬುದೇ ಈ ವ್ಯವಸ್ಥೆಯ ಅಂಕಿತ ನಾಮವಾಗಿ ರೂಢಿಗೆ ಬಂದಿದೆ. 

	ರಷ್ಯ ಮತ್ತು ಅದರ ಕಕ್ಷೆಯೊಳಗಿನ ರಾಷ್ಟ್ರಗಳ ಹೊರತಾಗಿ ಹೆಚ್ಚು ಕಡಿಮೆ ಎಲ್ಲ ರಾಷ್ಟ್ರಗಳೂ ಇಂಟರ್‍ಪೋಲಿನ ಸದಸ್ಯತ್ವ ಪಡೆದಿವೆ. 

	ವಾಸ್ತವವಾಗಿ ಇದೊಂದು ಅಂತರರಾಷ್ಟ್ರೀಯ ತೀರುವೆ ಮನೆ (ಕ್ಲಿಯರಿಂಗ್ ಹೌಸ್). ಸಾಧಾರಣ ಅಥವಾ ಸಾರ್ವತ್ರಿಕ ಕಾನೂನಿನ ಎದುರು ಎಸಗುವ ಕೊಲೆ. ಪಿತೂರಿ, ದರೋಡೆ, ವಂಚನೆ ಮುಂತಾದ ಅಪರಾಧಗಳನ್ನು ಕುರಿತಂತೆ ಗುಪ್ತ ಮಾಹಿತಿಗಳನ್ನು ಸದಸ್ಯ ರಾಷ್ಟ್ರಗಳ ನಡುವೆ ವಿನಿಮಯಿಸುವ ಕೇಂದ್ರವಿದು. ರಾಜಕೀಯ ಸಂತ್ರಸ್ತರ ನೆರವಿಗಾಗಲಿ ರಾಜಕೀಯ ಭಿನ್ನಮತೀಯರ ಸೇವೆಗಾಗಲಿ ಇದು ಮುಂದಾಗುವಂತಿಲ್ಲ-ಇದರ ಸಂವಿಧಾನದಲ್ಲಿಯೇ ಈ ನಿಷೇಧವನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಇಂಟರ್‍ಪೋಲ್ ಎಂಬುದು ಪೊಲೀಸ್ ದಳವಲ್ಲ. ಇದರ ಅಧೀನದಲ್ಲಿ ಕೆಲಸ ಮಾಡುವ ಪತ್ತೆದಾರರು ಇರುವುದಿಲ್ಲ. 

	ಒಂದು ಸದಸ್ಯ ರಾಷ್ಟ್ರ ತನ್ನ ನೆಲದಲ್ಲಿ ಘಟಿಸಿದ ಅಪರಾಧದ ತಪಾಸಣೆಗೆ ಇಂಟರ್‍ಪೋಲಿನ ನೆರವು ಕೋರಿದಾಗ ಇದು ಗುಮಾನಿದಾರರ ಎದುರು ಅವರು ಆಸರೆ ಪಡೆದಿರಬಹುದಾದ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುತ್ತದೆ. ಸಂಬಂಧಿತ ರಾಷ್ಟ್ರಗಳ ಪೊಲೀಸರ ಪರಸ್ಪರ ಸಹಕಾರದಿಂದ ತುಬ್ಬುದಾರಿಕೆ ಮುಂದುವರಿಯುತ್ತದೆ. ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಅಪರಾಧಿಗಳನ್ನು ಒಯ್ಯಬೇಕಾದಾಗ ಅಂತಾರಾಷ್ಟ್ರೀಯ ಕಾನೂನು ರೀತಿ ರಿವಾಜುಗಳನ್ನು ಅನುಸರಿಸಲಾಗುತ್ತದೆ. 

ಪಟ್ಟಿ 1 ಭಾರತೀಯ ಪೊಲೀಸ್ - ರಾಜ್ಯವಾರು ಅಂಕೆ ಅಂಶಗಳು
ಸ್ಟೇಟ್‍ಮೆಂಟ್-ಪಟ್ಟಿ

	ಖೋಟಾ ಪತ್ರಗಳನ್ನು ಉಪಯೋಗಿಸಿ ಬ್ಯಾಂಕುಗಳಿಂದ ಹಣ ಲಪಟಾಯಿಸುವುದು. ಮಾದಕ ಪದಾರ್ಥಗಳನ್ನು ಚಿನ್ನ ಮುಂತಾದ ಅಮೂಲ್ಯ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು, ಕೋಟಾ ನಾಣ್ಯ ಟಂಕಿಸಿ ಚಲಾವಣೆಗೆ ತರುವುದು, ವರ್ಗೀಕೃತ ಗುಪ್ತ ಮಾಹಿತಿಗಳಿಗೆ ವಾಮಮಾರ್ಗಗಳ ಮೂಲಕ ಪ್ರವೇಶ ಗಳಿಸಿ ಅವನ್ನು ತಮ್ಮ ರಾಷ್ಟ್ರಗಳಿಗೆ ಸಾಗಹಾಕಿ ದುಡ್ಡು ಸುಲಿಯುವುದು, ಮನುಷ್ಯ ದೇಹ ವ್ಯಾಪಾರ ಮುಂತಾದ ಹೇಯ ಕೃತ್ಯಗಳ ಎದುರು ರಾಷ್ಟ್ರ-ರಾಷ್ಟ್ರ ಸಹಕಾರದಿಂದ ಹೋರಾಡುವ ಸಂಸ್ಥೆ ಇಂಟರ್‍ಪೋಲ್.

ಪಟ್ಟಿ - 2 (ಜನಸಂಖ್ಯೆ) : (ಪೊಲೀಸ್) ಅನುಪಾತ
ಭಾರತ ಮತ್ತು ಪ್ರಪಂಚದ ಆಯ್ದ ಕೆಲವು ಪ್ರೌಢ ರಾಷ್ಟ್ರಗಳ ಕುರಿತ ಅನುಪಾತಗಳ ತುಲನಾತ್ಮಕ ಪಟ್ಟಿ

ಭಾರತ		ಅಮೆರಿಕ			ಗ್ರೇಟ್		ಜಪಾನ್		ಫ್ರಾನ್ಸ್ 		ಪಶ್ಷಿಮ
		ಸಂಯುಕ್ತ		ಬ್ರಿಟನ್						ಜರ್ಮನಿ
		ಸಂಸ್ಥಾನಗಳು									
1811 	445			565		585		562		468

	ಭಾರತದಲ್ಲಿರುವ ಪೊಲೀಸ್ ಪಡೆಗಳ ಸಂಖ್ಯೆ ಪ್ರಪಂಚದ ಇತರ ದೇಶಗಳಲ್ಲಿರುವ ಪೊಲೀಸ್ ಪಡೆಗಳ ಸಂಖ್ಯೆಗೆ ಹೋಲಿಸಿದಾಗ ಬಲು ಕಡಿಮೆ. ಈ ದೇಶದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳನ್ನು ಒಂದನೆಯ ಪಟ್ಟಿಯಲ್ಲಿ ನಮೂದಿಸಿದೆ. ಇತರ ದೇಶಗಳ ಮತ್ತು ಭಾರತದ ಪೊಲೀಸ್ ಸಂಸ್ಥೆಗಳ ಪೊಲೀಸ್ ಜನಸಂಖ್ಯೆಯ ಪ್ರಮಾಣಗಳನ್ನು ಎರಡನೆಯ ಪಟ್ಟಿಯಲ್ಲಿ ತೋರಿಸಲಾಗಿದೆ. 

	ಪ್ರಪಂಚದ ನಾನಾ ದೇಶಗಳ ಪೊಲೀಸ್ ಪಡೆಗಳು ಅಪರಾಧ ನಿರೋಧ ಮತ್ತು ಪತ್ತೇದಾರಿ ಕರ್ತವ್ಯಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬ ಪ್ರಶ್ನೆ ಎತ್ತುವುದುಂಟು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಪರಾಧ ಘಟಿಸಲು ಪೊಲೀಸರು ಕಾರಣರಲ್ಲ ಮತ್ತು ಅದರ ಹಿನ್ನೆಲೆಯಲ್ಲಿರುವ ಸಮಸ್ಯೆಗಳನ್ನು ತೊಡೆದುಹಾಕುವುದು ಪೊಲೀಸರ ಕರ್ತವ್ಯ ಅಲ್ಲ. ಅವರಿಂದ ಅದು ಸಾಧ್ಯವೂ ಆಗದು. ಪೊಲೀಸರ ಕರ್ತವ್ಯವೆಂದರೆ ಜನತೆಯ ಆಸೆ ಆಕಾಂಕ್ಷೆಗಳು ಶಾಂತ ವಾತಾವರಣದಲ್ಲಿ ಈಡೇರುವಂತೆ ಸಹಾಯ ಮಾಡುವುದು ಮತ್ತು ಸಣ್ಣಪುಟ್ಟ ದಂಗೆಗಳನ್ನು ತಡೆಯುವುದು ಮಾತ್ರ. ಇವನ್ನು ತಡೆಯದೆ ಬೆಳೆಯಲು ಬಿಟ್ಟರೆ ಕ್ರಾಂತಿಗಳು ದಿನದಿನವೂ ಹೆಚ್ಚಿ ದೇಶವೂ ಸಮಾಜವೂ ನಿರ್ಮೂಲವಾಗಬಹುದು. ಪೊಲೀಸರು ದಂಗೆ ಮುಂತಾದ ಪ್ರಸಂಗಗಳು ಆರಂಭವಾದಾಗ ಕಾನೂನಿನ ಪ್ರಕಾರ ಅವನ್ನು ತಡೆಯಬೇಕು. ಒಂದಿಗೇ ರಾಜಕಾರಣಿಗಳು ಅವುಗಳ ಮೂಲ ಕಾರಣಗಳನ್ನು ತೊಡೆದುಹಾಕಲು ಕೂಡ ಯತ್ನಿಸಬೇಕು. ಹೀಗೆ ಸಮಾಜ ಪೊಲೀಸ್ ರಾಜಕಾರಣಿಗಳು ನಡೆಸುವ ಪ್ರಜಾಪ್ರಭುತ್ವಾತ್ಮಕ ಸರ್ಕಾರ, ಎಲ್ಲಕ್ಕಿಂತ ಹೆಚ್ಚಾಗಿ ಜನತೆ ಶಾಂತಿಯುತ ವಾತಾವರಣದ ಬಗ್ಗೆ ಹೊಂದಿರತಕ್ಕ ಮನೋಭಾವ ಅತಿ ಮುಖ್ಯ. ಈ ದೃಷ್ಟಿಯಿಂದ ನೋಡಿದರೆ ಭಾರತದ ದಾಖಲೆ ಇಂಗ್ಲೆಂಡ್ ಮುಂತಾದ ದೇಶಗಳಷ್ಟೇ ಶ್ಲಾಘನೀಯವಾಗಿದ್ದು, ಉತ್ತರ ದಕ್ಷಿಣ ಅಮೆರಿಕ ಖಂಡಗಳು, ಆಫ್ರಿಕ ಈ ದೇಶಗಳಿಗಿಂತ ಬಹಳ ಉತ್ತಮವಾದ ಸನ್ನಿವೇಶವೆಂದೆನ್ನಬೇಕು. ಅಪರಾಧ ನಿರೋಧ ಮತ್ತು ಪತ್ತೇದಾರಿ ಕಾರ್ಯದಲ್ಲಿಯೂ ಭಾರತದ ಪೊಲೀಸರ ಕರ್ತವ್ಯ ಸಾಧನೆ ಬಹಳ ಪ್ರಶಂಸನೀಯವಾಗಿದೆ. 

ಭಾರತದ ಪೊಲೀಸ್ ಪಡೆಗಳ ಸಂಖ್ಯೆ ಸಾಪೇಕ್ಷವಾಗಿ ಪ್ರಪಂಚದ ಇತರ ದೇಶಗಳ ಪೊಲೀಸ್ ಪಡೆಗಳ ಸಂಖ್ಯೆಗಿಂತ ಬಲು ಕಡಿಮೆ. ಇತರ ಮುಂದುವರಿದ ದೇಶಗಳಿಗಿಂತ ಕೇವಲ ಮೂರರಲ್ಲೊಂದು ಪ್ರಮಾಣದಲ್ಲಿ ಪೊಲೀಸ್ ಸಂಖ್ಯೆ ಭಾರತದಲ್ಲಿದೆ. ಇದಲ್ಲದೆ, ಆ ದೇಶಗಳ ಪ್ರಗತಿ ಮತ್ತು ಸಾಕ್ಷರತೆ ಇವನ್ನು ನೋಡಿದರೆ ಭಾರತದ ಪೊಲೀಸಿನ ಪ್ರಮಾಣವಷ್ಟೇ ಅಲ್ಲ ಸಾಮಾನ್ಯ ಮಟ್ಟವೂ ಬಹಳ ಕೆಳಗಿನ ದರ್ಜೆಯದು ಎಂದು ತಿಳಿಯುತ್ತದೆ. ಆದರೆ, ಪುರೋಗಾಮಿ ದೇಶಗಳಲ್ಲಿ ಜನಸಂಖ್ಯೆಯ ಶೇಕಡ 80 ಕ್ಕೂ ಹೆಚ್ಚು ಮಂದಿ ಜನನಿಬಿಡ ಪಟ್ಟಣಗಳಲ್ಲಿ ವಾಸಿಸಿದರೆ ಭಾರತದಲ್ಲಿ ಜನಸಂಖ್ಯೆಯ ಶೇಕಡ 80 ಮಂದಿ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಅಪರಾಧ ಅದರಲ್ಲೂ ಸಂಪತ್ತಿಗೆ ಸಂಬಂಧಪಟ್ಟದ್ದು ಹೆಚ್ಚಾಗಿ ಪಟ್ಟಣಗಳಲ್ಲಿ ನಡೆಯುತ್ತದೆ. ಈ ಕಾರಣಗಳಿಂದಾಗಿ ಭಾರತದಲ್ಲಿ ಘಟಿಸುವ ಅಪರಾಧ ಪ್ರಮಾಣಗಳು ಪ್ರಪಂಚದಲ್ಲೆಲ್ಲ ಅತಿ ಕಡಿಮೆ. ಅಂತೆಯೇ ಪತ್ತೇದಾರಿ ಕಾರ್ಯದಲ್ಲಿ ಕೂಡ ಭಾರತ ಸಾಕಷ್ಟು ಯಶಸ್ಸು ಗಳಿಸಿದೆ.
(ಕೆ.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ